ವರುಣಾದಲ್ಲಿ ಲಿಂಗಾಯತ ಮುಖಂಡರ ಸಭೆ ನಡೆಸಿದ ಎಂ.ಬಿ.ಪಾಟೀಲ್

ಮೈಸೂರು,ಮೇ.6: ವರುಣಾ ಕ್ಷೇತ್ರದ ಚುನಾವಣೆ ಅಖಾಡ ರಂಗೇರಿದ್ದು, ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ಜೊತೆ ಮಾಜಿ ಸಚಿವ ಎಂ.ಬಿ ಪಾಟೀಲ್ ಸಭೆ ನಡೆಸಿ ಸಿದ್ದರಾಮಯ್ಯರನ್ನ ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.
ವರುಣ ಕ್ಷೇತ್ರ ವ್ಯಾಪ್ತಿಯ ಹದಿನಾರು ಗ್ರಾಮದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಎಂ.ಬಿ ಪಾಟೀಲ್, ಬಸವಣ್ಣನವರು ಹುಟ್ಟಿದ ದಿನ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಬಸವ ತತ್ವದ ಮೇಲೆ ಸಿದ್ದರಾಮಯ್ಯ ಅಪಾರವಾದ ನಂಬಿಕೆ ಇಟ್ಟಿದ್ದಾರೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಸಿದ್ದರಾಮಯ್ಯನವರು ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಪಾಪ ಸೋಮಣ್ಣ ಬಿಜೆಪಿಯವರ ಕುತಂತ್ರಕ್ಕೆ ಬಲಿಯಾಗುತ್ತಿದ್ದಾರೆ. ಸ್ವತಃ ಶ್ರೀನಿವಾಸ್ ಪ್ರಸಾದ್ ರವರೆ ಎರಡು ಕಡೆ ನೀನು ಸೋಲ್ತಿಯ ಕಣಪ್ಪ ಎಂದು ಹೇಳಿದ್ದಾರೆ. ಅಲ್ಲದೆ ಬಿಜೆಪಿಯವರು ಶೆಟ್ಟರ್ ಮತ್ತು ಸವದಿರನ್ನ ನೇರವಾಗಿ ರಾಜಕೀಯವಾಗಿ ಮುಗಿಸಲು ಮುಂದಾದರು. ಇದೀಗ ಸೋಮಣ್ಣನವರ ಸರದಿ ಆರಂಭವಾಗಿದೆ ಎಂದು ಹೇಳಿದರು.
ವೀರಶೈವ ಲಿಂಗಾಯತ ಸಮುದಾಯದ ನಾಯಕರನ್ನ ರಾಜಕೀಯವಾಗಿ ಮುಗಿಸಲು ಬಿಜೆಪಿ ಮುಂದಾಗಿದೆ. ನೀವೆಲ್ಲರೂ ಎಚ್ಚೆತ್ತುಕೊಳ್ಳಬೇಕು. ಈ ಬಾರಿ ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರಿಗೆ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು. ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ಸಭೆಯಲ್ಲಿ ಎಂ ಬಿ ಪಾಟೀಲ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ,ನಟಿ ಭಾವನಾ, ಕಾಂಗ್ರೆಸ್ ಮುಖಂಡರಾದ ಗುರುಸ್ವಾಮಿ, ಆಲನಹಳ್ಳಿ ಪುಟ್ಟಸ್ವಾಮಿ, ವರುಣ ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.







