130 ಸ್ಥಾನದೊಂದಿಗೆ ಬಿಜೆಪಿ ಸ್ಪಷ್ಟ ಬಹುಮತ: ಯಡಿಯೂರಪ್ಪ ವಿಶ್ವಾಸ

ಬೈಂದೂರು: ರಾಜ್ಯದಲ್ಲಿ 130 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ನಡೆಸುವುದು ಸತ್ಯ. ಹಾಗೆಯೇ ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ 25 ರಿಂದ 30 ಸಾವಿರ ಮತಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಲಿದ್ದಾರೆ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಂಡ್ಸೆಯಲ್ಲಿ ಶನಿವಾರ ನಡೆದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ದಾ ಮೊದಲಾದವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಬಿಜೆಪಿ 130 ಸೀಟುಗಳನ್ನು ಗೆಲ್ಲಲಿದ್ದೇವೆ ಎಂಬ ಭರವಸೆಯನ್ನು ಅವರಿಗೆ ಈಗಾಗಲೇ ನೀಡಿದ್ದೇವೆ. ಹೀಗಾಗಿ ನಾವೆಲ್ಲರೂ ಸೇರಿ ಗುರುರಾಜ ಗಂಟಿಹೊಳೆಯವರನ್ನು ಗೆಲ್ಲಿಸಬೇಕು. ನಿಮ್ಮೆಲ್ಲರ ಮೇಲೆ ಪೂರ್ಣ ವಿಶ್ವಾಸವಿದೆ ಎಂದರು.
ಚುನಾವಣೆ ಸಂದರ್ಭದಲ್ಲಿ ಕೆಲವರು ನಮ್ಮ ಅಭ್ಯರ್ಥಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದ್ಯಾವುದಕ್ಕೂ ಕವಡೆ ಕಾಸಿನ ಕಿಮ್ಮತ್ತಿಲ್ಲ. ಯಾರು ಕೂಡ ಇಂಥ ಅಪಪ್ರಚಾರಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಾವೆಲ್ಲರೂ ಹುಮ್ಮಸ್ಸಿನಿಂದ ಇನಷ್ಟು ವೇಗವಾಗಿ ಚುನಾವಣೆ ಕಾರ್ಯ ಮಾಡಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಮೊದಲಾದವರು ಉಪಸ್ಥಿತರಿದ್ದರು.
ಸುಕುಮಾರ್ ಶೆಟ್ಟಿ ಮನವೊಲಿಸಿದರೂ ಹಠ ಬಿಡುತ್ತಿಲ್ಲ: ಯಡಿಯೂರಪ್ಪ
ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರನ್ನು ನಾವೆಲ್ಲ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಆದರೆ ಅವರ ಹಠ ಬಿಡುತ್ತಿಲ್ಲ. ಪಕ್ಷ ಅವರಿಗೆ ಶಾಸಕರಾಗಲು ಅವಕಾಶ ಕೊಟ್ಟಿದೆ. ಅವರು ಮನಸ್ಸಲ್ಲಿನ ನೋವು ಮರೆತು ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದು ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಸಮು ದಾಯದ ಮತ ಹೆಚ್ಚು ಕಮ್ಮಿಯಾಗಲ್ಲ. ಈ ಬಗ್ಗೆ ಯಾವುದೇ ಅನುಮಾನ ಬೇಡ. ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಲಿಂಗಾಯತ ಮಾತ್ರವಲ್ಲ ಎಲ್ಲ ಜಾತಿಯವರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದರು.
ನಿರೀಕ್ಷೆ ಮೀರಿ ಬಿಜೆಪಿ ಪರವಾದ ಅಲೆಯಿದೆ. ಸಮ್ಮಿಶ್ರ ಸರಕಾರ ಮಾಡಿ ನಾವು ಅನುಭವಿಸಿದ್ದು ಆ ಪರಿಸ್ಥಿತಿ ಮತ್ತೆ ಬರಬಾರದು ಎಂಬುದು ನಮ್ಮ ಇಂಗಿತ. ಬಿಜೆಪಿ 125-130 ಸ್ಥಾನಗಳನ್ನು ಗೆದ್ದು ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುತ್ತೇವೆ. ಈಗಾಗಾಲೇ 70-75 ವಿಧಾನಸಭಾ ಕ್ಷೇತ್ರ ಸುತ್ತಿದ್ದು ಜನರ ನಾಡಿಮಿಡಿತದ ಅರಿವಿದೆ. ಪ್ರಧಾನಿ ಮೋದಿ ಸಹಿತ ರಾಷ್ಟ್ರೀಯ ನಾಯಕರು ನಮಗೆ ಶಕ್ತಿ ತುಂಬುತ್ತಿದ್ದಾರೆ ಎಂದರು.