ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ: ಬಿಜೆಪಿಗೆ ಮತಹಾಕದಂತೆ ಲಿಂಗಾಯತ- ವೀರಶೈವ ವಿಚಾರ ವೇದಿಕೆ ಕರೆ

ಬೆಂಗಳೂರು, ಮೇ 6: ‘ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಲಿಂಗಾಯತ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತರುವ ಆತಂಕಕಾರಿ ಮಾತುಗಳಾನ್ನಾಡಿದ್ದಾರೆ. ಹಾಗಾಗಿ ಲಿಂಗಾಯತ ಸಮುದಾಯದವರು ಬಿಜೆಪಿಗೆ ಮತ ಹಾಕಬಾರದು’ ಎಂದು ಕರ್ನಾಟಕ ಲಿಂಗಾಯತ ಮತ್ತು ವೀರಶೈವ ವಿಚಾರ ವೇದಿಕೆ ಕರೆ ನೀಡಿದೆ.
ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವೇದಿಕೆಯ ಮುಖಂಡ ಕೆ.ವಿ.ನಾಗರಾಜಮೂರ್ತಿ, ‘ರಾಜ್ಯದಲ್ಲಿ ಬಿಜೆಪಿ ಪಕ್ಷವು ಲಿಂಗಾಯತ ಸಮುದಾಯವನ್ನು ಕಡೆಗಣಿಸುತ್ತಿದ್ದು, ಬಿ.ಎಲ್ ಸಂತೋಷ್ ಅವರು ‘ನಾವು ಹಿಂದುತ್ವದಲ್ಲಿ ಮುಂದುವರೆಯುತ್ತೇವೆ. ನಮಗೆ ಲಿಂಗಾಯತ ಅಗತ್ಯವಿಲ್ಲ, ನಾವು ಇನ್ನೆಷ್ಟು ದಿನ ಲಿಂಗಾಯತ ಓಲೈಕೆ ಮಾಡಿಕೊಂಡಿರಬೇಕು’ ಎಂದು ಅಹಂಕಾರದ ಮಾತುಗಳನ್ನಾಡಿ, ಸಮುದಾಯದ ಸ್ವಾಭಿಮಾನವನ್ನು ಕೆಣಕಿದ್ದಾರೆ’ ಎಂದರು.
ಬೊಮ್ಮಾಯಿ ಅವರ ಸರಕಾರ ಬಂದಾಗಿನಿಂದ ಬಿಜೆಪಿ ಒಂದಲ್ಲ ಒಂದು ರೀತಿಯಲ್ಲಿ ಲಿಂಗಾಯತರ ಮೇಲೆ ಪ್ರತ್ಯಕ್ಷ-ಪರೋಕ್ಷವಾಗಿ ದಬ್ಬಾಳಿಕೆಯನ್ನು ನಡೆಸುತ್ತಿದೆ. ಪಠ್ಯಪುಸ್ತಕಗಳಲ್ಲಿ ವಚನಕಾರರ ವಚನ ಸಾಹಿತ್ಯವನ್ನು ಕೈ ಬಿಟ್ಟಿರುವುದು, ಬಸವಣ್ಣನ ವಿಚಾರಧಾರೆಗಳನ್ನು ತಿರುಚಿರುವುದು ಸ್ಪಷ್ಟವಾಗಿ ಗೋಚರಿಸಿದೆ. 2017ರಲ್ಲಿ ಸಿದ್ಧರಾಮಯ್ಯ ಸರಕಾರ ಬಸವಣ್ಣನವರ ಜೀವನ ಚರಿತ್ರೆಯನ್ನು ಕುರಿತ ನಾಟಕಕ್ಕೆ 75 ಲಕ್ಷ ರೂ.ಗಳನ್ನು ಮೀಸಲಿಡಲಾಗಿತ್ತು. 2018ರಲ್ಲಿ ನಾಟಕ ಪ್ರದರ್ಶನಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ನಾಟಕದ ಯೋಜನೆಯನ್ನೇ ಸ್ಥಗಿತಗೊಳಿಸಿದೆ ಎಂದು ಹೇಳಿದರು.
ಬಿಜೆಪಿ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆಸಲಾಗುತ್ತಿದ್ದ ವಚನ ಸಂಗೀತೋತ್ಸವವನ್ನು ಕೈಬಿಡಲಾಗಿದೆ. ವಚನ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಮೀಸಲಿಟ್ಟಿದ್ದ 90 ಲಕ್ಷ ರೂ.ಅನುದಾನವನ್ನು ಸಚಿವ ಸುನೀಲ್ ಕುಮಾರ್ ಕಾರ್ಕಳ ಉತ್ಸವಕ್ಕೆ ಬಳಸಿಕೊಂಡಿದ್ದು, ಅಲ್ಲಿ ವಚನ ಸಾಹಿತ್ಯದ ಒಂದೇ ಒಂದು ಕಾರ್ಯಕ್ರಮವನ್ನು ನಡೆಸದೆ ಕೇವಲ ವೈದಿಕಶಾಹಿ ಕಾರ್ಯಕ್ರಮಗಳನ್ನೇ ನಡೆಸಿ, ನಮ್ಮ ಲಿಂಗಾಯತ ಸಮುದಾಯಕ್ಕೆ ಅಪಚಾರವೆಸಗಿದ್ದಾರೆ ಎಂದು ಕೆ.ವಿ. ನಾಗರಾಜಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ವರ್ಷ ಶರಣರ ಚಿಂತನೆಗಳಿಗೆ ಅನುಗುಣವಾಗಿ ರಾಜ್ಯಮಟ್ಟದಲ್ಲಿ ನಡೆಸಲಾಗುತ್ತಿದ್ದ ಶರಣರ ಜಯಂತಿಗಳನ್ನು ರದ್ದು ಮಾಡಿ, ಅದನ್ನು ಜಿಲ್ಲಾಮಟ್ಟದ ಕಾರ್ಯಕ್ರಮಗಳಾಗಿ ಆಯೋಜಿಸಲಾಗುತ್ತಿದೆ. ಇದು ಶರಣರಿಗೆ ಮಾಡಿರುವ ದೊಡ್ಡ ಅಪಚಾರವಾಗಿದೆ. ಹೀಗೆ ನಿರಂತರವಾಗಿ ಶರಣರ ಸಂಸ್ಲೃತಿಯ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಬಿಜೆಪಿ ಸರಕಾರ ಇದೀಗ ಚುನಾವಣಾ ಸಂದರ್ಭದಲ್ಲಿಯೂ ತಮ್ಮ ವೈದಿಕಶಾಹಿ ಮನುವಾದಿ ಸಿದ್ಧಾಂತಗಳನ್ನು ಮುನ್ನೆಡೆಸಿಕೊಂಡು ಹೋಗುತ್ತಿದೆ ಎಂದು ಅವರು ತಿಳಿಸಿದರು.
ಇತ್ತೀಚಿನ ರಾಜಕೀಯ ಬೆಳವಣಿಗೆಯನ್ನು ಗಮನಿಸಿದರೆ, ಲಿಂಗಾಯತ ಸಮುದಾಯದ ನಾಯಕ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಅವರು ಕಣ್ಣೀರು ಹಾಕುವಂತೆ ಮಾಡಿದ್ದು, ನಮ್ಮೆಲ್ಲರ ಕಣ್ಣ ಮುಂದೆ ಇದೆ. ಯಡಿಯೂರಪ್ಪ ನಂತರದ ನಾಯಕರ ಮೇಲೆ ದಾಳಿ ಶುರು ಮಾಡಿದ್ದು, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಆಯನೂರು ಮಂಜುನಾಥ್, ಸಂಜಯ್ ಪಾಟೀಲ್ ಸೊಗಡು ಶಿವಣ್ಣ ಮುಂತಾದ ಪ್ರಭಾವಿ ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡಲಾಗಿದೆ. ಹೀಗೆ ಲಿಂಗಾಯತ ನಾಯಕರನ್ನು ನಿರ್ಣಾಮ ಮಾಡುವ ಬಿಜೆಪಿಯ ಕುತಂತ್ರ ನಡೆಯುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಬಿಜೆಪಿಯು ಲಿಂಗಾಯತ ಮತ್ತು ವೀರಶೈವ ಸಮುದಾಯಕ್ಕೆ ಅನ್ಯಾಯವನ್ನು ಮಾಡುತ್ತಿರುವ ಕಾರಣ ಸಮುದಾಯವು ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಬೇಕಾಗಿದೆ. ಈ ಮೂಲಕ ಸಮುದಾಯದವರು ಬಿಜೆಪಿಗೆ ತಕ್ಕ ಪಾಠವನ್ನು ಕಲಿಸಬೇಕಾಗಿದೆ ಎಂದು ಅವರು ಕರೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಸಮುದಾಯದ ಮುಖಂಡರಾದ ಸಾಗರನಹಳ್ಳಿ ನಟರಾಜ್, ಪ್ರೊ. ಕೃಪಾಶಂಕರ್, ಅಶೋಕ್ ಲೋಣಿ, ಆರ್.ಜಿ.ಹಳ್ಳಿ ನಾಗರಾಜ ಮತ್ತಿತರರು ಉಪಸ್ಥಿತರಿದ್ದರು.