68 ನ್ಯಾಯಾಧೀಶರಿಗೆ ಜಿಲ್ಲಾ ನ್ಯಾಯಾಧೀಶರಾಗಿ ಭಡ್ತಿ ಪ್ರಶ್ನಿಸುವ ಅರ್ಜಿ: ಸುಪ್ರೀಂ ಕೋರ್ಟ್‌ನಿಂದ ನಾಳೆ ವಿಚಾರಣೆ
ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರೂ ಭಡ್ತಿ ಪಡೆದವರ ಪಟ್ಟಿಯಲ್ಲಿ

ಹೊಸದಿಲ್ಲಿ, ಮೇ 6: 65 ಶೇಕಡ ಕೋಟ ನಿಯಮವನ್ನು ಬಳಸಿಕೊಂಡು 68 ನ್ಯಾಯಾಧೀಶರಿಗೆ ಜಿಲ್ಲಾ ನ್ಯಾಯಾಧೀಶ ಹುದ್ದೆಗೆ ಭಡ್ತಿ ನೀಡಿರುವುದನ್ನು ಪ್ರಶ್ನಿಸಿ ಸೀನಿಯರ್ ಸಿವಿಲ್ ನ್ಯಾಯಾಧೀಶ ದರ್ಜೆಯ ಇಬ್ಬರು ನ್ಯಾಯಾಂಗ ಅಧಿಕಾರಿಗಳು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮೇ 8ರಂದು ವಿಚಾರಣೆಗೆ ಎತ್ತಿಕೊಳ್ಳಲಿದೆ.
ಭಡ್ತಿ ಪಡೆದ ಈ 68 ನ್ಯಾಯಾಧೀಶರಲ್ಲಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹರೀಶ್ ಹಸ್ಮುಖ್ಭಾಯ್ ವರ್ಮ ಕೂಡ ಸೇರಿದ್ದಾರೆ. ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ್ದರು. ಆ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ ಎಂಬುದಾಗಿ ನಿರ್ಣಯಿಸಿರುವ ಅವರು, ಎರಡು ವರ್ಷಗಳ ಜೈಲು ಶಿಕ್ಷೆಯನ್ನು ನೀಡಿದ್ದರು. ಈ ತೀರ್ಪಿನ ಆಧಾರದಲ್ಲಿ ಸರಕಾರವು ರಾಹುಲ್ ಗಾಂಧಿಯ ಲೋಕಸಭಾ ಸದಸ್ಯತ್ವವನ್ನು ರದ್ದುಪಡಿಸಿತ್ತು.
ಗುಜರಾತ್ ಸರಕಾರದ ಕಾನೂನು ಇಲಾಖೆಯ ಅಧೀನ ಕಾರ್ಯದರ್ಶಿ ರವಿಕುಮಾರ್ ಮಹೇಟ ಮತ್ತು ಗುಜರಾತ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯಕ ನಿರ್ದೇಶಕ ಸಚಿನ್ ಪ್ರತಾಪ್ರಾಯ್ ಮೆಹ್ತಾ ಸುಪ್ರೀಂ ಕೋರ್ಟ್ ನಲ್ಲಿ ಈ ಅರ್ಜಿಗಳನ್ನು ಸಲ್ಲಿಸಿದ್ದಾರೆ. ನೇಮಕಾತಿ ನಿಯಮಗಳ ಪ್ರಕಾರ, ಜಿಲ್ಲಾ ನ್ಯಾಯಾಧೀಶ ಹುದ್ದೆಯನ್ನು 65 ಶೇಕಡ ಮೀಸಲಾತಿಯಡಿ ತುಂಬಬಹುದಾದರೂ, ಅರ್ಹತೆ ಮತ್ತು ಹಿರಿತನವನ್ನು ಪರಿಗಣಿಸಬೇಕು ಹಾಗೂ ಅರ್ಹತಾ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ತೇರ್ಗಡೆಯಾಗಬೇಕು ಎಂದು ಅರ್ಜಿದಾರರು ಹೇಳಿದ್ದಾರೆ.
ಆದರೆ, ಇಲ್ಲಿ ಅರ್ಹತೆ-ಹಿರಿತನ ನಿಯಮವನ್ನು ಕೈಬಿಡಲಾಗಿದೆ ಮತ್ತು ಹಿರಿತನ-ಅರ್ಹತೆಯ ಆಧಾರದಲ್ಲಿ ನೇಮಕಾತಿಗಳನ್ನು ಮಾಡಲಾಗಿದೆ. ನಾನು 200ರಲ್ಲಿ 135.5 ಅಂಕಗಳನ್ನು ಗಳಿಸಿದ್ದೇನೆ ಮತ್ತು ಸಚಿನ್ ಪ್ರತಾಪ್ರಾಯ್ ಮೆಹ್ತಾ 200ರಲ್ಲಿ 148.5 ಅಂಕಗಳನ್ನು ಗಳಿಸಿದ್ದಾರೆ, ಆದರೆ ಇದಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿರುವ ಅಭ್ಯರ್ಥಿಗಳಿಗೆ ಭಡ್ತಿ ನೀಡಲಾಗಿದೆ ಎಂದು ರವಿಕುಮಾರ್ ಮಹೇಟ ಹೇಳಿದ್ದಾರೆ.
ಹೈಕೋರ್ಟ್ ಎಪ್ರಿಲ್ 10ರಂದು ಹೊರಡಿಸಿರುವ ಆಯ್ಕೆ ಪಟ್ಟಿಯನ್ನು ರದ್ದುಪಡಿಸುವಂತೆ ಅವರು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ.







