ಬಂಗಾಳದ ಗ್ರಾಮವೊಂದರ ಫ್ಯಾಶನ್ ಡಿಸೈನರ್ ಗೆ ಕೃತಜ್ಞತೆ ಪತ್ರ ಮತ್ತು ಆಹ್ವಾನ ಕಳುಹಿಸಿದ ಬ್ರಿಟಿಶ್ ದೊರೆ

ಲಂಡನ್,ಮೇ 6: ಬ್ರಿಟಿಶ್ ದೊರೆ ಮೂರನೇ ಚಾರ್ಲ್ಸ್ ಅವರಿಗೆ ಕೋಟಿನಲ್ಲಿ ಧರಿಸುವ ಪದಕದ ಕೊಂಡಿ (ಬ್ರೂಶ್) ಹಾಗೂ ಬ್ರಿಟನ್ ರಾಣಿ ಕ್ಯಾಮಿಲಾ ಅವರಿಗೆ ಉಡುಪನ್ನು ವಿನ್ಯಾಸಗೊಳಿಸಿದ್ದ ಪಶ್ಚಿಮಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಗ್ರಾಮವೊಂದರ ಫ್ಯಾಶನ್ ವಿನ್ಯಾಸಕಿಯೊಬ್ಬರಿಗೆ ಕೃತಜ್ಞತೆ ಅರ್ಪಿಸುವ ಪತ್ರವನ್ನು ಬ್ರಿಟನ್ ರಾಜಕುಟುಂಬ ಕಳುಹಿಸಿಕೊಟ್ಟಿದೆ ಹಾಗೂ ಆಕೆಯನ್ನು ಮೂರನೇ ಚಾರ್ಲ್ಸ್ ಅವರ ಕಿರೀಟಧಾರಣೆ ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು.
29 ವರ್ಷದ ಪ್ರಿಯಾಂಕಾ ಮಲ್ಲಿಕ್ ಅವರು ಈ ಮೊದಲು ಬ್ರಿಟನ್ ರಾಜಕುಟುಂಬದ ಪ್ರತಿನಿಧಿಗಳನ್ನು ಭೇಟಿಯಾಗಿ ರಾಣಿಗೆ ಉಡುಪನ್ನು ವಿನ್ಯಾಸಗೊಳಿಸುವ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆನಂತರ ಆಕೆ ವಸ್ತ್ರವಿನ್ಯಾಸವನ್ನು ಕಳುಹಿಸಿಕೊಟ್ಟಿದ್ದು, ಅದಕ್ಕೆ ರಾಜಕುಟುಂಬದ ಮೆಚ್ಚುಗೆ ವ್ಯಕ್ತಪಡಿಸಿತ್ತು ಹಾಗೂ ಪ್ರಶಂಸಾಪತ್ರವನ್ನು ನೀಡಿತ್ತು.
ಪ.ಬಂಗಾಳದ ಸಿಂಗೂರಿನಲ್ಲಿ ಖಾಸಗಿ ಹೆಣ್ಮಕ್ಕಳ ಶಿಕ್ಷಣ ಸಂಸ್ಥೆಯೊಂದರಲ್ಲಿ ಹನ್ನೆರಡನೆ ತರಗತಿ ಪೂರ್ಣಗೊಳಿಸಿದ ಬಳಿಕ ಮಲ್ಲಿಕ್ ಅವರು ಇಟಲಿಯ ಮಿಲಾನ್ ವಿಶ್ವವಿದ್ಯಾನಿಲಯದಲ್ಲಿ ಫ್ಯಾಶನ್ ವಿನ್ಯಾದಲ್ಲಿ ಆನ್ಲೈನ್ ಶಿಕ್ಷಣದ ಮೂಲಕ ಪದವಿ ಪಡೆದಿದ್ದರು. ಅದೇ ವಿವಿಯಲ್ಲಿ ಆಕೆ ಸ್ನಾತಕೋತ್ತರ ಪದವಿ ಕೂಡಾ ಗಳಿಸಿದ್ದರು.
2019ರಲ್ಲಿ ಇಟಲಿಯ ಮಿಲಾನ್ನಲ್ಲಿ ನಡೆದ ಅಂತಾರಾಷ್ಟ್ರೀಯ ಫ್ಯಾಶನ್ ಡಿಸೈನರ್ ಪುರಸ್ಕಾರ, 2020ರಲ್ಲಿ ಇಟಲಿಯಲ ವರ್ಷದ ಫ್ಯಾಶನ್ ಸ್ಟೈಲಿಸ್ಟ್ ಹಾಗೂ 2022ರಲ್ಲಿ ಭಾರತದ ರಿಯಲ್ ಸೂಪರ್ವುಮನ್ ’ ಪ್ರಶಸ್ತಿಗಳನ್ನು ಆಕೆ ಗಳಿಸಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ತಾನು ಕಾರ್ಯಕ್ರಮಕ್ಕೆ ಹಾಜರಾಗಿಲ್ಲವೆಂದು ಮಲ್ಲಿಕ್ ತಿಳಿಸಿದ್ದಾರೆ.
ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ ಅವರ ಕಿರೀಟಾರೋಹಣದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅವರಿಗೆ ಮುಂಬೈನ ವಿಶ್ವಪ್ರಸಿದ್ಧ ಡಾಬಾವಾಲಾಗಳು ಸಾಂಪ್ರದಾಯಿಕ ಪುಣೇರಿ ಪಗಡಿ ಹಾಗೂ ಉಪಾರ್ಣೆೆೆ ಎಂಬ ಸಾಂಪ್ರದಾಯಿಕ ಶಾಲನ್ನು ವಿಶೇಷ ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ.
ಪುಣೇರಿ ಪಗಡಿಯು 19ನೇ ಶತಮಾನದಲ್ಲಿ ಪರಿಚಯಿಸಲ್ಪಟ್ಟ ಸಾಂಪ್ರಾದಾಯಿಕ ಪೇಟಾ ಆಗಿದ್ದು,ಅದೊಂದು ಹೆಮ್ಮೆ ಹಾಗೂ ಗೌರವದ ಸಂಕೇತವೆಂದು ಮಹಾರಾಷ್ಟ್ರದಲ್ಲಿ ಪರಿಗಣಿಸಲಾಗಿದೆ. ಉಪರ್ಣೆಯು ಒಂದು ವಿಶಿಷ್ಟ ಶಾಲು ಆಗಿದ್ದು, ಅದನ್ನು ಸಾಂಪ್ರಾದಾಯಿಕ ಕಾರ್ಯಕ್ರಮಗಳಲ್ಲಿ ಪುರುಷರು ಧರಿಸುತ್ತಾರೆ.
ಮುಂಬೈನ ತಾಜ್ ಹೊಟೇಲ್ನಲ್ಲಿ ಬ್ರಿಟಿಶ್ ಉಪ ಹೈಕಮೀಶನರ್ ಆಯೋಜಿಸಿದ್ದ ಕಾರ್ಯಕ್ರಮಕ್ಕಕೆ ಡಾಬಾವಾಲಾಗಳ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸಲಾಗಿತ್ತು. ಅಲ್ಲಿ ತಾವು ಪುಣೇರಿ ಪಗಡಿ ಹಾಗೂ ಉಪಾರ್ನೆಯನ್ನು ಬ್ರಿಟಿಶ್ ಅಧಿಕಾರಿಗಳಿಗೆ ಹಸ್ತಾಂತರಿಸಿರುವುದಾಗಿ ಮುಂಬೈ ಡಾಬಾವಾಲಾಗಳ ಸಂಘದ ಅಧ್ಯಕ್ಷ ರಾಮದಾಸ್ ಕರ್ವಾಂಡೆ ತಿಳಿಸಿದರು. ದೊರೆ ಚಾರ್ಲ್ಸ್ ಅವರಿಗೆ ಈ ಉಡುಗೊರೆಗಳನ್ನು ಕಳುಹಿಸಿಕೊಡುವುದಾಗಿ ಬ್ರಿಟಿಶ್ ಹೈಕಮೀಶನ್ ಅಧಿಕಾರಿಗಳು ತಮಗೆ ಭರವಸೆ ನೀಡಿದ್ದಾರೆಂದು ಅವರು ತಿಳಿಸಿದರು.
2003ರಲ್ಲಿ ಮೂರನೇ ಚಾರ್ಲ್ಸ್ ಅವರು ಮುಂಬೈಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಡಾಬಾವಾಲಾಗಳನ್ನು ಭೇಟಿಯಾಗಿ ಅವರ ಸೇವೆಯನ್ನು ಶ್ಲಾಘಿಸಿದ್ದರು.