ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ ರ ಕಿರೀಟಾರೋಹಣ: ದೇಶ,ವಿದೇಶಗಳ ಗಣ್ಯರು, ಧಾರ್ಮಿಕ ನಾಯಕರು ಭಾಗಿ

ಲಂಡನ್,ಮೇ 6: ಬ್ರಿಟನ್ ನ ದೊರೆಯಾಗಿ ಮೂರನೇ ಚಾರ್ಲ್ಸ್ ಅವರು ಶನಿವಾರ ಕಿರೀಟಧಾರಣೆ ಮಾಡಿದರು. ವೆಸ್ಟ್ಮಿನಿಸ್ಟರ್ ಅಬ್ಬೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಚಾರ್ಲ್ಸ್ ಅವರಿಗೆ ಕಿರೀಟಧಾರಣೆಯನ್ನು ನೆರವೇರಿಸಲಾಯಿತು.
ಕಿರೀಟಧಾರಣೆಗೆ ಮುನ್ನ ದೊರೆ ಚಾರ್ಲ್ಸ್ ಹಾಗೂ ಅವರ ಪತ್ನಿ ಕ್ಯಾಮಿಲಾ ಅವರನ್ನು ಬಕಿಂಗ್ಹ್ಯಾಂ ಆರಮನೆಯಿಂದ ವೆಸ್ಟ್ಮಿನಿಸ್ಟರ್ ಅಬ್ಬೆಗೆ ಅದ್ದೂರಿ ಮೆರವಣಿಗೆಯಲ್ಲಿ ಕರೆದುಕೊಂಡು ಬರಲಾಯಿತು.
ವಿವಿಧ ದೇಶಗಳ ವರಿಷ್ಠರು, ರಾಜಪ್ರತಿನಿಧಿಗಳು, ಸಾಮಾಜಿಕ ಗಣ್ಯರು ಸೇರಿದಂತೆ 2200ಕ್ಕೂ ಅಧಿಕ ಮಂದಿ ಕಿರೀಟಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಭಾರತದ ಪ್ರತಿನಿಧಿಗಳಿಗಾಗಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಅವಪರ ಪತ್ನಿ ಡಾ. ಸುದೇಶಾ ಧನಕರ್ ಭಾಗವಹಿಸಿದ್ದರು . ಕಾರ್ಯಕ್ರಮದಲ್ಲಿ ವಿವಿಧ ಕಾಮನ್ವೆಲ್ತ್ ರಾಷ್ಟ್ರಗಳ ವರಿಷ್ಠರ ಜೊತೆಗೆ ಧನಕರ್ ದಂಪತಿ ಆಸೀನರಾಗಿದ್ದರು.
ಕ್ಯಾಂಟರ್ಬರಿಯ ಅರ್ಚ್ಬಿಶಪ್ ಜಸ್ಟಿನ್ ವೆಲ್ಬಿ ಅವರು ಬ್ರಿಟಿಶ್ ದೊರೆಯ ಕಿರೀಟ ಧಾರಣೆ ಕಾರ್ಯಕ್ರಮದ ವಿಧಿವಿಧಾನಗಳನ್ನು ನೆರವೇರಿಸಿದರು. ಹಿಂದೂ, ಮುಸ್ಲಿಂ, ಸಿಖ್ಖ್, ಬೌದ್ಧ ಹಾಗೂ ಯಹೂದಿ ಸಮುದಾಯಗಳ ಧಾರ್ಮಿಕ ಮುಖಂಡರು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬೈಬಲ್ ಮೇಲೆ ಕೈ ಇರಿಸಿ ದೊರೆ ಚಾರ್ಲ್ಸ್ ಅವರು, ನ್ಯಾಯ ಹಾಗೂ ಕರುಣೆಯೊಂದಿಗೆ ಬ್ರಿಟನ್ನ ಜನತೆಯನ್ನು ಆಳುವ ಹಾಗೂ ಎಲ್ಲಾ ಧರ್ಮಗಳು, ವಿಶ್ವಾಸಗಳನ್ನು ಅನುಸರಿಸುವ ಜನರು ಮುಕ್ತವಾಗಿ ಬದುಕಲು ಸಾಧ್ಯವಾಗುವಂತಹ ವಾತಾವರಣವನ್ನು ಪೋಷಿಸುವ ಪ್ರಮಾಣವಚನವನ್ನು ಸ್ವೀಕರಿಸಿದರು.
ಕಿರೀಟಾರೋಹಣ ಕಾರ್ಯಕ್ರಮದಲ್ಲಿ ಚಾರ್ಲ್ಸ್ ಅವರು ಪಾರಂಪರಿಕ ಕಡುಗೆಂಪು ಬಣ್ಣದ ವೆಲ್ವೆಟ್ ನಿಲುವಂಗಿಯನ್ನು ಧರಿಸಿದ್ದರು. ಇದೇ ಉಡುಪನ್ನು ಆರನೇ ಜಾರ್ಜ್ ಅವರು 1937ರಲ್ಲಿ ಅವರ ಕಿರೀಟಾರೋಹಣ ಕಾರ್ಯಕ್ರಮದಲ್ಲಿ ಧರಿಸಿದ್ದರು.
ಬ್ರಿಟನ್ ಪ್ರಧಾನಿ ರಿಶಿ ಸುನಾಕ್ ಅವರು ಕಿರೀಟಾರೋಹಣ ಕಾರ್ಯಕ್ರಮದಲ್ಲಿ ಬೈಬಲ್ ನ ‘ಹೊಸ ಒಡಂಬಡಿಕೆ’ಯ ಕೆಲವು ಸ್ತೋತ್ರಗಳ ವಾಚನಗಳನ್ನು ಮಾಡಿದರು.
ಸುಮಾರು ಎರಡು ತಾಸುಗಳ ಕಾಲ ನಡೆದ ಕಾರ್ಯಕ್ರಮವು ವೆಸ್ಟ್ಮಿನಿಸ್ಟರ್ ಅಬ್ಬೆಯಲ್ಲಿ ಗಂಟೆಗಳ ಮೊಳಗಿಸುವಿಕೆ, ಕುಶಾಲುತೋಪುಗಳನ್ನು ಹಾರಿಸುವುದರೊಂದಿಗೆ ಸಮಾರೋಪಗೊಂಡಿತು. ಆನಂತರ ದೊರೆ ಚಾರ್ಲ್ಸ್ ಹಾಗೂ ಅವರ ಪತ್ನಿ ಕ್ಯಾಮಿಲಾ ಅವರು ಕುದುರೆಗಳ ಸಾರೋಟಿನಲ್ಲಿ ಬಕಿಂಗ್ಹ್ಯಾಂ ಅರಮನೆಗೆ, ಮರಳಿದರು.
ಬ್ರಿಟನ್ ನಲ್ಲಿ ಸುಮಾರು 70 ವರ್ಷಗಳ ಬಳಿಕ ಕಿರೀಟಾರೋಹಣ ಕಾರ್ಯಕ್ರಮ ನಡೆದಿದೆ. ಹಿಂದಿನ ಬ್ರಿಟನ್ ರಾಣಿ ಎಲಿಝಬೆತ್ ಅವರಿಗೆ 1953ರ ಜೂನ್ನಲ್ಲಿ ಕಿರೀಟಾರೋಹಣವಾಗಿತ್ತು.
ಬ್ರಿಟನ್ ರಾಣಿ ಎಲಿಝಬೆತ್ 2022ರ ಸೆಪ್ಟೆಂಬರ್ 8ರಂದು ನಿಧನರಾದ ಹಿನ್ನೆಲೆಯಲ್ಲಿ ಬ್ರಿಟನ್ನ ನೂತನ ದೊರೆಯಾಗಿ ಮೂರನೇ ಚಾರ್ಲ್ಸ್ ಪಟ್ಟವನ್ನೇರಿದ್ದರು.