ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾರನ್ನು ತಳ್ಳಾಡಿದ ಡಿಸಿಪಿ: ಆರೋಪ
ಯಶವಂತಪುರ ಪೊಲೀಸ್ ಠಾಣೆ ಮುಂದೆ ಕಾರ್ಯಕರ್ತರ ಪ್ರತಿಭಟನೆ
ಬೆಂಗಳೂರು, ಮೇ 6:ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾರನ್ನು ಡಿಸಿಪಿ ತಳ್ಳಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಯಶವಂತಪುರ ಪೊಲೀಸ್ ಠಾಣೆ ಎದುರು ಜಮಾಯಿಸಿ ಧರಣಿ ನಡೆಸಿದರು.
ಶನಿವಾರ ಕ್ಷೇತ್ರದಲ್ಲಿ ಮತಯಾಚನೆ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಗಿದ್ದು, ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾರನ್ನು ಪುರುಷ ಪೊಲೀಸ್ ಸಿಬ್ಬಂದಿ ತಳ್ಳಾಡಿದ್ದಾರೆ. ಅಲ್ಲದೆ, ಪೊಲೀಸರು ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆಂದು ಆರೋಪಿ ಕಾಂಗ್ರೆಸ್ ಕಾರ್ಯಕರ್ತರು ಠಾಣೆ ಬಳಿ ಜಮಾಯಿಸಿದರು. ಈ ವೇಳೆ ಕೆಲಕಾಲ ಬಿಗುವಿನ ವಾತಾವರಣ ಕಂಡುಬಂತು.
ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ತೆರಳಿ ಚೀಟಿ ಹಂಚಿಕೆ ಮಾಡುತ್ತಿದ್ದಾರೆ ಎನ್ನುವ ವಿಚಾರಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ಆರಂಭವಾಗುತ್ತಿದ್ದಂತೆ ಪೊಲೀಸರು ಗುಂಪು ಚದುರಿಸಲು ಲಾಠಿ ಬೀಸಿದ್ದರು.
ಈ ವೇಳೆ ಅಭ್ಯರ್ಥಿ ಕುಸುಮಾ ಅವರನ್ನು ಉದ್ದೇಶ ಪೂರಕವಾಗಿ ತಳ್ಳಿದರು ಎನ್ನಲಾಗಿದೆ. ಅಲ್ಲದೇ ಪೊಲೀಸರ ಜತೆ ಸೇರಿ ಬಿಜೆಪಿ ಕಾರ್ಯಕರ್ತರು ಹಲ್ಲೆಮಾಡಿರುವುದಾಗಿ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಸದ್ಯ ಪೊಲೀಸ್ ಠಾಣೆಯ ಮುಂದೆ ಬಿಗಿ ಬಂದೋಬಸ್ತ್ ಮಾಡಿದ್ದು, ಕೆಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.