ಐಪಿಎಲ್: ಆರ್‌ಸಿಬಿಗೆ ಸೋಲುಣಿಸಿದ ಡೆಲ್ಲಿ ಕ್ಯಾಪಿಟಲ್ಸ್
ಮಹಿಪಾಲ್, ವಿರಾಟ್ ಕೊಹ್ಲಿ ಅರ್ಧಶತಕ ವ್ಯರ್ಥ, ಫಿಲ್ ಸಾಲ್ಟ್ 87 ರನ್

ಹೊಸದಿಲ್ಲಿ, ಮೇ 6: ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಭರ್ಜರಿ ಅರ್ಧಶತಕದ(87 ರನ್, 45 ಎಸೆತ, 8ಬೌಂಡರಿ, 6 ಸಿಕ್ಸರ್)ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.
ಶನಿವಾರ ನಡೆದ ಐಪಿಎಲ್‌ನ 50ನೇ ಪಂದ್ಯದಲ್ಲಿ ಗೆಲ್ಲಲು 182 ರನ್ ಗುರಿ ಬೆನ್ನಟ್ಟಿದ ಡೆಲ್ಲಿ 16.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 187 ರನ್ ಗಳಿಸಿತು. ರಿಲಿ ರೊಸ್ಸೌ(ಔಟಾಗದೆ 35, 22 ಎಸೆತ), ಮಿಚೆಲ್ ಮಾರ್ಚ್(26 ರನ್) ಹಾಗೂ ಡೇವಿಡ್ ವಾರ್ನರ್(22 ರನ್, 14 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಇದಕ್ಕೂ ಮೊದಲು ಟಾಸ್ ಜಯಿಸಿದ ಆರ್‌ಸಿಬಿ ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಲು ಯಶಸ್ವಿಯಾಯಿತು.
ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ(55 ರನ್, 46 ಎಸೆತ, 5 ಬೌಂಡರಿ) ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಮಹಿಪಾಲ್ ಲೋಮ್ರಿರ್(ಔಟಾಗದೆ 54 ರನ್)ಅರ್ಧಶತಕಗಳ ಕೊಡುಗೆ ನೀಡಿದರು.
ಇನಿಂಗ್ಸ್ ಆರಂಭಿಸಿದ ಕೊಹ್ಲಿ ಹಾಗೂ ಎಫ್‌ಡು ಪ್ಲೆಸಿಸ್(45 ರನ್, 32 ಎಸೆತ)ಮೊದಲ ವಿಕೆಟ್‌ಗೆ 82 ರನ್ ಜೊತೆಯಾಟ ನಡೆಸಿ ಭದ್ರಬುನಾದಿ ಹಾಕಿಕೊಟ್ಟರು.
ಈ ಇಬ್ಬರು ಬೇರ್ಪಟ್ಟ ಬೆನ್ನಿಗೇ ಗ್ಲೆನ್ ಮ್ಯಾಕ್ಸ್‌ವೆಲ್(0)ವಿಕೆಟ್ ಒಪ್ಪಿಸಿದರು. ಆಗ 3ನೇ ವಿಕೆಟ್‌ಗೆ 55 ರನ್ ಜೊತೆಯಾಟ ನಡೆಸಿದ ಕೊಹ್ಲಿ ಹಾಗೂ ಲೋಮ್ರಿರ್ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದರು. ಕೊಹ್ಲಿ ಔಟಾದ ನಂತರ ಲೋಮ್ರಿರ್ ಅವರು ದಿನೇಶ್ ಕಾರ್ತಿಕ್(11 ರನ್,9 ಎಸೆತ)ಜೊತೆಗೆ 4ನೇ ವಿಕೆಟ್‌ನಲ್ಲಿ 35 ರನ್ ಸೇರಿಸಿ ತಂಡದ ಸ್ಕೋರ್ ಹೆಚ್ಚಾಗಲು ನೆರವಾದರು.
ಮಹಿಪಾಲ್ ಲೋಮ್ರರ್ ಔಟಾಗದೆ (54 ರನ್,29 ಎಸೆತ,6 ಬೌಂಡರಿ, 3 ಸಿಕ್ಸರ್)ಉಳಿದರು. ಡೆಲ್ಲಿ ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಮಾರ್ಷ್(2-21)ಯಶಸ್ವಿ ಪ್ರದರ್ಶನ ನೀಡಿದರು.







