ಕಣಿಯೂರು: ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯೆ ಕಾಂಗ್ರೆಸ್ ಸೇರ್ಪಡೆ

ಬೆಳ್ತಂಗಡಿ, ಮೇ 7: ಕಣಿಯೂರು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯೆ ಪ್ರಿಯಾಂಕಾ ರಾಮಕೃಷ್ಣ ಗೌಡ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪ್ರಿಯಾಂಕಾ ಪ್ರತಿನಿಧಿಸುತ್ತಿದ್ದ ವಾರ್ಡ್ ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅನುದಾನ ಕೊಡಿಸುವುದಾಗಿ ಭರವಸೆ ನೀಡಿ ಯಾವುದೇ ಅನುದಾನ ನೀಡದೆ ಕಡೆಗಣಿಸಿದ್ದಾರೆ. ಇದರಿಂದ ಬೇಸತ್ತು ಬಿಜೆಪಿ ತೊರೆದು ಬೆಳ್ತಂಗಡಿ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾದರು.
ಇದೆ ವೇಳೆ ಬಿಜೆಪಿ ಕಾರ್ಯಕರ್ತ ವಿಜಯ ನಾಯ್ಕ ಕಣಿಯೂರು ಮತ್ತು ಕಣಿಯೂರು ಬಿಜೆಪಿ ಬೂತ್ ಸಮಿತಿ ಕಾರ್ಯದರ್ಶಿ ರಾಧಾಕೃಷ್ಣ ಗೌಡ ಕೂಡ ಕಾಂಗ್ರೆಸ್ ಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಭಗೀರಥ ಜಿ., ತಾಪಂ ಮಾಜಿ ಸದಸ್ಯರಾದ ಈಶ್ವರ ಭಟ್ ಮಾಹಿಲ್ತೋಡಿ, ಉಮವಾತಿ ದೇಜಪ್ಪ ಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ ಗೌಡ, ಪಕ್ಷದ ವಕ್ತಾರರಾದ ಮನೋಹರ್ ಕುಮಾರ್ ಇಳಂತಿಲ, ಉಜಿರೆ ಗ್ರಾಪಂ ಉಪಾಧ್ಯಕ್ಷೆ ವಿನುತಾ ರಜತ ಗೌಡ, ಲಾಯಿಲ ಗ್ರಾಪಂ ಸದಸ್ಯೆ ರೇವತಿ, ಕಣಿಯೂರು ಗ್ರಾಪಂ ಸದಸ್ಯೆ ಸುಮತಿ ಶೆಟ್ಟಿ, ಪಕ್ಷದ ಸ್ಥಳೀಯ ಮುಖಂಡರಾದ ಸತೀಶ್ ಪದ್ಮುಂಜ, ಕಾಸಿಂ ಪದ್ಮುಂಜ, ಸರೋಜಿನಿ, ಲಿಂಗಪ್ಪ ಬಂಗೇರ, ಚಂದ್ರಕಾಂತ ಮತ್ತಿತರರು ಉಪಸ್ಥಿತರಿದ್ದರು.