ದೇಶದ ಪ್ರಧಾನಮಂತ್ರಿ ಪಕ್ಷದ ಪ್ರಚಾರಮಂತ್ರಿಯಾಗಿದ್ದಾರೆ: ನಿಖೇತ್ ರಾಜ್ ಮೌರ್ಯ
ಮುಡಿಪುವಿನಲ್ಲಿ ಯು.ಟಿ.ಖಾದರ್ ಪರವಾಗಿ ಕಾಂಗ್ರೆಸ್ ಪ್ರಚಾರ ಸಭೆ

ಕೊಣಾಜೆ: ಮನುಷ್ಯ ಮನುಷ್ಯನನ್ನು ದ್ವೇಷ ಮಾಡಬಾರದು ಮತ್ತು ಮನುಷ್ಯತ್ವದ ಮೇಲೆ ದೇಶವನ್ನು ಕಟ್ಟಲು ಕಾಂಗ್ರೆಸ್ ಬೇಕಿದೆ. ವಾಜಪೇಯಿ ಸೇರಿದಂತೆ ಇತರೆ ಪ್ರಧಾನಿಗಳಿಗೆ ಇರುವ ಘನತೆ ಮೋದಿಯವರಿಗಿಲ್ಲ. ದೇಶದ ಪ್ರಧಾನಮಂತ್ರಿ ಪಕ್ಷದ ಪ್ರಚಾರಮಂತ್ರಿಯಾಗಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶೇ.100 ಸತ್ಯ ಎಂದು ಕಾಂಗ್ರೆಸ್ ಮುಖಂಡ ನಿಖೇತ್ ರಾಜ್ ಮೌರ್ಯ ಅವರು ಹೇಳಿದರು.
ಅವರು ಮುಡಿಪು ಜಂಕ್ಷನ್ ನಲ್ಲಿ ಶನಿವಾರ ಯು.ಟಿ.ಖಾದರ್ ಅವರ ಚುನಾವಣಾ ಪ್ರಚಾರಾರ್ಥವಾಗಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ತಮ್ಮದೇ ಪಕ್ಷದ ಸಂಸದನ ಕಿರುಕುಳಕ್ಕೀಡಾಗಿ 15 ದಿನಗಳಿಂದ ಜಂಥರ್ ಮಂತರ್ ನಲ್ಲಿ ಕಣ್ಣೀರು ಸುರಿಸುತ್ತಿ ರುವ ಮಹಿಳಾ ಕುಸ್ತಿಪಟುಗಳನ್ನು ಮಾತನಾಡಲು ಸಮಯವಿಲ್ಲದ ಪ್ರಧಾನಿಗಳಿಗೆ ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಿಸಿದ ತಕ್ಷಣ ಕ್ಯಾಮರಾ ಹಿಡಿದುಕೊಂಡು ಪ್ರಾಣಿಗಳನ್ನು ಹುಡುಕಲು ಸಮಯವಿದೆ ಎಂದರು.
1,54,000 ಯುವಕರು ನಿರುದ್ಯೋಗದಿಂದ ನರಳಿ ಆತ್ಮಹತ್ಯೆ ಮಾಡಿಕೊಂಡಿರುವ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ದಿ ಕೇರಳ ಸ್ಟೋರಿ ಸಿನಿಮಾ ನೋಡಿ ಅನ್ನುವ ಪ್ರಧಾನಮಂತ್ರಿ. ಆಂಜನೇಯನ ಹೆಸರನ್ನು ಇಟ್ಟುಕೊಂಡು ದೇವರ ಹೆಸರಿಗೆ ಅವಮಾನ ನಡೆಸಿ ರಾಜಕಾರಣ ಮಾಡುತ್ತಿದ್ದಾರೆ. ಭಜನೆ, ಆಝಾನ್ ಮಾಡಬೇಕಾ ಅನ್ನುವುದನ್ನು ಕೇಳಲು ಪ್ರಧಾನಮಂತ್ರಿಯನ್ನು ಆಯ್ಕೆ ಮಾಡಿಲ್ಲ. ಗೋವಾದಲ್ಲಿ ಬಿಜೆಪಿಯ ಮುಖ್ಯ ಮಂತ್ರಿ ಮನೋಹರ್ ಪರಿಕ್ಕರ್ ಅವರೇ ಶ್ರೀ ರಾಮಸೇನೆಯನ್ನು ನಿಷೇಧ ಮಾಡಿದ್ದರು. ಇದು ಬಿಜೆಪಿಯವರಿಗೆ ಕಾಣಲಿಲ್ಲ, ಇತ್ತೀಚೆಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕಂಡು ರಾಜಕೀಯ ನಡೆಸುತ್ತಿದ್ದಾರೆ ಎಂದರು.
ಎಲ್ಲದರಲ್ಲೂ ಟ್ಯಾಕ್ಸ್ ಪಡೆಯುತ್ತಿರುವ ಸರಕಾರ ಕೊರೊನಾ ಸಂದರ್ಭ ಆಂಬ್ಯುಲೆನ್ಸ್ ಸೇವೆಗೂ 14% ಟ್ಯಾಕ್ಸ್ ಪಡೆದಿರುವುದರ ಕುರಿತು ಚುನಾವಣೆ ಸಂದರ್ಭ ಚರ್ಚೆಯಾಗಬೇಕಿದೆ ಎಂದರು.
ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಮಾತನಾಡಿ, ಧರ್ಮ,ಜಾತಿ ಯನ್ನು ಒಡೆಯದೆ, ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕಿದೆ. ಕಾಂಗ್ರೆಸ್ ಪಕ್ಷವು ತನ್ನ ಅಧಿಕಾರವಧಿಯನ್ನು ಬಡವರ ಏಳಿಗಾಗಿ ಅನೇಕ ಕೊಡುಗೆಗಳನ್ನು ನೀಡಿದೆ. ಇದೀಗ. ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರ, ಮಹಿಳೆಯರ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಅನೇಕ ಕೊಡುಗೆಗಳನ್ನು ಘೋಷಣೆ ಮಾಡಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರು ಮಾತನಾಡಿ, ಇಡೀ ದೇಶದಲ್ಲಿ ನಾಲ್ಕೈದು ರಾಜ್ಯಗಳು ಮಾತ್ರ ಸ್ವಂತ ಆರ್ಥಿಕ ಶಕ್ತಿಯೊಂದಿಗೆ ಸ್ವಂತ ಕಾಲಲ್ಲಿ ನಿಂತಿದೆ. ಅದರಲ್ಲಿ ಬೆಂಗಳೂರು ಕೂಡಾ ಒಂದು. ನಮ್ಮ ಸಂಪನ್ಮೂಲದಿಂದಲೇ ಖರ್ಚು ಮಾಡುವಷ್ಟು ಸಂಪನ್ಮೂಲ ನಮ್ಮ ರಾಜ್ಯದಲ್ಲಿದೆ. ಆದ್ದರಿಂದ ಕರ್ನಾಟಕಕ್ಕೆ ಡಬ್ಬಲ್ ಇಂಜಿನ್ ಸರ್ಕಾರ ಅಗತ್ಯ ಇಲ್ಲ ಎಂದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಭವ್ಯ ನರಸಿಂಹ ಮೂರ್ತಿ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಕೇರಳ ವಯನಾಡು ಶಾಸಕರಾದ ಸಿದ್ದೀಕ್, ಹಿರಿಯರಾದ ವೆಂಕಪ್ಪ ಕಾಜವ ಮಿತ್ತಕೋಡಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಮಮತಾ ಡಿ.ಎಸ್.ಗಟ್ಟಿ, ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷರಾದ ಚಂದ್ರಹಾಸ್ ಕರ್ಕೇರ, ಮುಖಂಡರಾದ ಎನ್ .ಎಸ್. ನಾಸೀರ್ ನಡು ಪದವು, ಅಬ್ದುಲ್ ಜಲೀಲ್ ಮೋಂಟುಗೋಳಿ, ವರ್ಕಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್ ಹರ್ಷಾದ್ ವರ್ಕಾಡಿ, ನಾಸೀರ್ ಟಿ.ಎಸ್.ಸಾಮಣಿಗೆ, ಮುಖಂಡರಾದ ಅಬ್ದುಲ್ ಖಾದರ್ ಹಾಜಿ ಎಸ್ .ಕೆ, ಹೈದರ್ ಕೈರಂಗಳ, ಮಹಮ್ಮದ್ ಮೋನು ಮೊದಲಾದವರು ಉಪಸ್ಥಿತರಿದ್ದರು.
ಅಬ್ದುಲ್ ಜಲೀಲ್ ಮೋಂಟುಗೋಳಿ ಸ್ವಾಗತಿಸಿದರು. ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.