ಯಾವುದೇ ಕಾರಣ ನೀಡದೆ ಮಾನವ ಹಕ್ಕು ಹೋರಾಟಗಾರ ಮುಹಮ್ಮದ್ ಶುಐಬ್ ರನ್ನು ವಶಕ್ಕೆ ಪಡೆದ ಉತ್ತರ ಪ್ರದೇಶ ಪೊಲೀಸರು
ಲಕ್ನೋ: ಮಾನವ ಹಕ್ಕುಗಳ ಗುಂಪು 'ರಿಹಾಯಿ ಮಂಚ್' ಸ್ಥಾಪಕ, ಸಾಮಾಜಿಕ ಕಾರ್ಯಕರ್ತ, ವಕೀಲ ಮುಹಮ್ಮದ್ ಶುಐಬ್ ಅವರನ್ನು ಉತ್ತರ ಪ್ರದೇಶ ಪೊಲೀಸರು ರವಿವಾರ ಬೆಳಿಗ್ಗೆ ವಶಕ್ಕೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.
ಶುಐಬ್ ಅವರನ್ನು ಪೊಲೀಸ್ ಸಿಬ್ಬಂದಿಗಳ ತಂಡವೊಂದು ಬೆಳಿಗ್ಗೆ 7:15ರ ಸುಮಾರಿಗೆ ಕರೆದುಕೊಂಡು ಹೋಗಿದೆ, ಅವರ ಬಂಧನ ಕಾರಣದ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ ಎಂದು ಶುಐಬ್ ಪತ್ನಿ ತಿಳಿಸಿದ್ದಾರೆ.
ದಮನಿತ ಸಮುದಾಯಗಳ ದನಿಯಾಗಿ ಕೆಲಸ ಮಾಡುವ ಶುಐಬ್ ಅವರು, ರಿಹಾಯ್ ಮಂಚ್ ಎಂಬ ಸಂಸ್ಥೆ ಮೂಲಕ ಅಗತ್ಯವಿರುವವರಿಗೆ ಕಾನೂನು ನೆರವು ನೀಡುತ್ತಾ ಬಂದಿದ್ದಾರೆ.
ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಡಿಸೆಂಬರ್ 2019ರಲ್ಲಿ ಅವರನ್ನು ಬಂಧಿಸಲಾಗಿತ್ತು. ಜನವರಿ 15, 2020 ರಂದು ಅವರು ಜಾಮೀನು ಪಡೆದು ಹೊರಬಂದಿದ್ದರು.
ಶುಐಬ್ ಅವರನ್ನು ಪೊಲೀಸರು ಅವರ ಮನೆಯಿಂದ ಕರೆದೊಯ್ಯುತ್ತಿರುವ ವೀಡಿಯೊವನ್ನು ಪತ್ರಕರ್ತರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅದಾಗ್ಯೂ, ಅವರ ಬಂಧನದ ಹಿಂದಿನ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ. ಅವರ ಬಂಧನದ ವಿರುದ್ಧ ಹಲವಾರು ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.