ಕಷ್ಟ ಕಾಲದಲ್ಲಿ ಬಿಜೆಪಿಯ ಯಾವ ನಾಯಕರೂ ಜನರ ಬಳಿ ಸುಳಿದಿಲ್ಲ: ಸುಧೀರ್ ಕುಮಾರ್ ಮುರೋಳಿ
ಬ್ರಹ್ಮಾವರ, ಮೇ 7: ಕಾಂಗ್ರೆಸ್ ಕಾಲದಲ್ಲಿ ಒಂದು ಲೀಟರ್ ದೀಪದೆಣ್ಣೆಗೆ 40 ರೂ. ಇದ್ದರೆ, ಇಂದು 120 ರೂ. ಆಗಿದೆ. ಕೊರೋನ ಬಂದಾಗ ಕೆಲಸವನ್ನು ಕಳೆದುಕೊಂಡಾಗ, ನೆರೆ ಬಂದಾಗ, ಪೆಟ್ರೋಲ್ ದರ, ಆಟೋ ಚಾಲಕರ ಆಟೋ ಪ್ರೀಮಿಯಂ ದರ ಜಾಸ್ತಿಯಾಗಿದೆ. ಇಂತಹ ಕಷ್ಟಕರವಾದ ಸಂದರ್ಭ ದಲ್ಲಿ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿಯ ಯಾವ ನಾಯಕರೂ ಜನರ ಬಳಿ ಸುಳಿಯಲಿಲ್ಲ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೋಳಿ ಆರೋಪಿಸಿದ್ದಾರೆ.
ವಿಧಾನ ಸಭಾ ಚುನಾವಣೆ ಪೂರ್ವಭಾವಿಯಾಗಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಳಕರ್ಜೆ ಬಳಿ ಶನಿವಾರ ಹಮ್ಮಿಕೊಳ್ಳಲಾದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ನೀರುಳ್ಳಿ ಬೆಲೆ ಜಾಸ್ತಿಯಾಗಿದೆ ಎಂದರೆ ನಿರ್ಮಲಾ ಸೀತಾರಾಂ ನಾನು ನೀರುಳ್ಳಿ ತಿನ್ನುವುದಿಲ್ಲ ಎನ್ನುತ್ತಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಯಾಗಿದೆ ಎಂದರೆ, ನೀವು ರಸ್ತೆ, ಸೇತುವೆ, ನಿರುದ್ಯೋಗದ ಬಗ್ಗೆ ಕೇಳಬೇಡಿ, ನೀವು ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ನಳಿನ್ ಕುಮಾರ್ ಕಟೀಲ್ ಹೇಳುತ್ತಾರೆ ಎಂದು ಅವರು ಟೀಕಿಸಿದರು.
ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ರಾಜ್ಯ ಸಂವಹನ ವಿಭಾಗದ ಮುಖ್ಯಸ್ಥ ಅಮೃತ್ ಶೆಣೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೇಲಿಯೋ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ್ ಹೇರೂರು, ಕೃಷ್ಣಮೂರ್ತಿ ಆಚಾರ್ಯ, ಸುಧಾಕರ್ ಶೆಟ್ಟಿ ಮೇರ್ಮಾಡಿ, ಭುಜಂಗ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಗೋಪಿ ನಾಯ್ಕ್, ಅಶೋಕ ಶೆಟ್ಟಿ, ಕುಶಲ್ ಶೆಟ್ಟಿ ಉಪಸ್ಥಿತರಿದ್ದರು.