ವಿಧಾನಸಭಾ ಚುನಾವಣೆ: ನಾಳೆ(ಮೇ 8) ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ
ಅಭ್ಯರ್ಥಿಗಳಿಗೆ ಮಾತ್ರ ಮನೆ-ಮನೆ ಪ್ರಚಾರಕ್ಕೆ ಅವಕಾಶ

ಬೆಂಗಳೂರು, ಮೇ 7: ತೀವ್ರ ಪೈಪೋಟಿ ಸೃಷ್ಟಿಸಿರುವ ರಾಜ್ಯ ವಿಧಾಸನಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ(ಮೇ 8) ಸಂಜೆ 6ಗಂಟೆಗೆ ತೆರೆ ಬೀಳಲಿದ್ದು, ಮನತದಾರರ ಮನಗೆಲ್ಲಲು ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ಕೊನೆಯ ಕ್ಷಣದಲ್ಲಿ ಅಬ್ಬರದ ಪ್ರಚಾರ ನಡೆಸಿದರು.
ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಘಟಾನುಘಟಿ ನಾಯಕರು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರೆ, ಅತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಮುಖಂಡ ರಾಹುಲ್ ಗಾಂಧಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ವಿವಿಧೆಡೆಗಳಲ್ಲಿ ಮತಯಾಚನೆ ಮಾಡಿದರು.
ಈ ಮಧ್ಯೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ ಸಹಿತ ಇನ್ನಿತರ ಮುಖಂಡರು ಅಂತಿಮ ಕ್ಷಣದಲ್ಲಿ ತಮ್ಮ ಅಭ್ಯರ್ಥಿಗಳ ಪರ ಮತದಾರರ ಮನವೊಲಿಕೆ ಮಾಡಿದರು.
ನಾಳೆ(ಮೇ 8) ಸಂಜೆ 6ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಕ್ಷೇತ್ರದಲ್ಲಿ ಮತದಾನದ ಹಕ್ಕು ಹೊಂದಿಲ್ಲದÀವರು, ಸ್ಟಾರ್ ಪ್ರಚಾರಕರೂ ಕ್ಷೇತ್ರ ಬಿಟ್ಟು ತೆರಳಲು ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಒಂದು ವೇಳೆ ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ. ಮತದಾನ ಮುಕ್ತಾಯದ 48 ಗಂಟೆಗೂ ಮೊದಲು ಚುನಾವಣಾ ಬಹಿರಂಗ ಪ್ರಚಾರ ಅಂತ್ಯವಾಗಲಿದೆ.
ಕ್ಷೇತ್ರದ ಮತದಾರರು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ವ್ಯಕ್ತಿಗಳು ಕ್ಷೇತ್ರದಲ್ಲಿ ಉಳಿಯುವಂತಿಲ್ಲ. ಬಹಿರಂಗ ಪ್ರಚಾರ ಮುಗಿದ ಬಳಿಕ ರಾಜಕೀಯ ಪಕ್ಷಗಳ ನಾಯಕರು ಕ್ಷೇತ್ರ ತೊರೆಯಬೇಕು. ಅಲ್ಲದೆ, ಚುನಾವಣಾ ಪ್ರಚಾರಕ್ಕೆ ಯಾವುದೇ ರೀತಿಯ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ ಎಂದು ಆಯೋಗ ಸೂಚನೆ ನೀಡಿದೆ. ಮಂಗಳವಾರ(ಮೇ 9)ರ ಸಂಜೆ 6ಗಂಟೆಯ ವರೆಗೆ ಅಭ್ಯರ್ಥಿಗಳು ಮನೆ-ಮನೆ ಪ್ರಚಾರ ಕೈಗೊಳ್ಳಲು ಅವಕಾಶವಿದೆ.
ಮದ್ಯ ಮಾರಾಟ ನಿಷೇಧ: ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಮೇ 8ರ ಸಂಜೆ 5ಗಂಟೆಯಿಂದ ಮೇ 11ರ ಬೆಳಗ್ಗೆ 6ಗಂಟೆಯ ವರೆಗೆ ಮದ್ಯ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಮೇ 10ರ ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಅಂದು ಮತದಾರರು ಘಟಾನುಘಟಿ ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ.
ಕಣದಲ್ಲಿ 2,615 ಅಭ್ಯರ್ಥಿಗಳು: ಚುನಾವಣಾ ಕಣದಲ್ಲಿ ಅಂತಿಮವಾಗಿ 2,615 ಅಭ್ಯರ್ಥಿಗಳು ಉಳಿದಿದ್ದಾರೆ. ಆ ಪೈಕಿ 2,430 ಪುರುಷರು, 184 ಮಹಿಳೆಯರು ಮತ್ತು ಒಬ್ಬರು ಇತರರು ಕಣದಲ್ಲಿದ್ದಾರೆ. ಒಟ್ಟು 58,545 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚುನಾವಣೆಯಲ್ಲಿ 1,15,709 ಬ್ಯಾಲೆಟ್ ಯೂನಿಟ್ ಬಳಕೆ ಮಾಡಲಾಗುತ್ತದೆ. 82,543 ಕಂಟ್ರೋಲ್ ಯೂನಿಟ್, 89,379 ವಿವಿ ಪ್ಯಾಟ್‍ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಆಯೋಗ ತಿಳಿಸಿದೆ.
ರಾಜ್ಯದಲ್ಲಿ ಒಟ್ಟು 47,488 ಮಂದಿ ಸೇವಾ ಮತದಾರರಿದ್ದು, 11,71,558 ಮಂದಿ ಯುವ ಮತದಾರರಿದ್ದು, 5,71,281 ಮಂದಿ ವಿಕಲಚೇತನ ಹಾಗೂ 12,15,920 ಮಂದಿ 80 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಸಿನ ಮತದಾರರಿದ್ದಾರೆ. ಒಟ್ಟು 2,67,28,053 ಮಂದಿ ಪುರುಷರು, 2,64,00,074 ಮಂದಿ ಮಹಿಳೆಯರು ಹಾಗೂ 4,927 ಮಂದಿ ಇತರೆ ಮತದಾರರು ಸೇರಿದಂತೆ ಒಟ್ಟು 5,31,33,054 ಮಂದಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆಂದು ಆಯೋಗ ಮಾಹಿತಿ ನೀಡಿದೆ.







