ಮೋಚಾ ಚಂಡಮಾರುತ: ಮತದಾನಕ್ಕೆ ಮಳೆಯ ಅಡ್ಡಿ ಸಾಧ್ಯತೆ; ಮೇ 11ರ ವರೆಗೆ ರಾಜ್ಯದಲ್ಲಿ ಮಳೆ

ಬೆಂಗಳೂರು, ಮೇ 7: ಬಂಗಾಲ ಕೊಲ್ಲಿಯಲ್ಲಿ ಮೋಚಾ ಚಂಡಮಾರುತ ರೂಪುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೇ 11ರವರೆಗೆ ಮಳೆ ಮುಂದುವರೆಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮೇ 10ರ ಮತದಾನಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ.
ರಾಜ್ಯದ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಅಧಿಕ ಮಳೆಯಾಗಲಿದೆ. ಈ ಮಳೆ ಇನ್ನೂ ಒಂದು ವಾರ ಮುಂದುವರೆಯಲಿದೆ. ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ನಾಲ್ಕು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುವ ಮುನ್ಸೂಚನೆ ಇರುವುದರಿಂದ ಈ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಗದಗ, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು ಜಿಲ್ಲೆ ವ್ಯಾಪ್ತಿಯಲ್ಲಿ ಒಂದು ದಿನ ಬಿಟ್ಟು ದಿನ ಅಲ್ಲಲ್ಲಿ ಭಾರಿ ಮಳೆ ಸುರಿಯಲಿದೆ. ಇದರ ಹೊರತಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಮಹತ್ವದ ಬದಲಾವಣೆಗಳು ಇಲ್ಲ.
ಕರಾವಳಿ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೇ 11ರ ವರೆಗಿನ ಅವಧಿಯಲ್ಲಿ ಮೊದಲ ಒಂದು ದಿನ ಮೇ 8ರ ವರೆಗೆ ಹಗುರದಿಂದ ಸಾಧಾರಣ ಮಳೆ ಸುರಿಯಲಿದೆ. ನಂತರದ ಮೂರು ದಿನ ಇಲ್ಲಿ ಮಳೆ ಮತ್ತಷ್ಟು ಚುರುಕಾಗಲಿದೆ. ಇನ್ನೂ ಕರಾವಳಿ ಭಾಗದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರಿನಲ್ಲಿ ನಾಲ್ಕು ದಿನ ಮಳೆ: ಬೆಂಗಳೂರು ನಗರದಲ್ಲಿ ಮುಂದಿನ ನಾಲ್ಕು ದಿನ ಸಾಧಾರಣವಾಗಿ ಅಲ್ಲಲ್ಲಿ ಮಳೆ, ಗುಡುಗು ಸಹಿತ ಮಳೆಯಾಗಲಿದೆ. ಕೆಲವು ದಿನಗಳಿಂದ ಕಂಡು ಬರುತ್ತಿರುವ ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.







