ಹಿಂಸಾಚಾರ ಪೀಡಿತ ಮಣಿಪುರದಿಂದ ತಮ್ಮ ಜನರನ್ನು ವಾಪಾಸು ಕರೆಸಿಕೊಳ್ಳಲು ರಾಜ್ಯಗಳ ಕಸರತ್ತು

ಹೊಸದಿಲ್ಲಿ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹದಲ್ಲಿ ಸಿಲುಕಿಕೊಂಡಿರುವ ತಮ್ಮ ರಾಜ್ಯಗಳ ಜನರನ್ನು ತವರಿಗೆ ಕರೆ ತರಲು ಮಹಾರಾಷ್ಟ್ರ, ಆಂಧ್ರಪ್ರದೇಶ, ರಾಜಸ್ಥಾನ, ತೆಲಂಗಾಂಣ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಹರ್ಯಾಣ ಮತ್ತು ಉತ್ತರಾಖಂಡ ರಾಜ್ಯಗಳು ವಿಶೇಷ ಕಾರ್ಯಾಚರಣೆ ಆರಂಭಿಸಿವೆ.
ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ವಿಶೇಷ ವಿಮಾನಗಳನ್ನು ವ್ಯವಸ್ಥೆ ಮಾಡಿದ್ದರೆ, ರಾಜಸ್ಥಾನ ಸರ್ಕಾರ ಇಂಡಿಗೊ ವಿಮಾನದ ಮೂಲಕ ಈಗಾಗಳೇ 125 ಮಂದಿ ರಾಜಸ್ಥಾನಿಗಳನ್ನು ಕರೆ ತಂದಿದೆ. ಈ ಪೈಕಿ ಬಹುತೇಕ ಮಂದಿ ವಿದ್ಯಾರ್ಥಿಗಳಾಗಿದ್ದು, ಇವರನ್ನು ಇಂಫಾಲದಿಂದ ಕರೆಸಿಕೊಳ್ಳಲಾಗಿದೆ. ಮಣಿಪುರದ ನೆರೆ ರಾಜ್ಯಗಳಾದ ಅಸ್ಸಾಂ, ಮೇಘಾಲಯ ಹಾಗೂ ತ್ರಿಪುರಾ ಕೂಡಾ ಈಗಾಗಲೇ ಸಂಘರ್ಷಪೀಡಿತ ರಾಜ್ಯದಿಂದ ತಮ್ಮ ಜನರನ್ನು ವಾಪಾಸು ಕರೆತರುವ ಪ್ರಯತ್ನ ಆರಂಭಿಸಿವೆ.
ಮಣಿಪುರದಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 240 ವಿವಿಧ ರಾಜ್ಯಗಳ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ಆದಾಗ್ಯೂ ಹಲವು ಮಂದಿ ವಿದ್ಯಾರ್ಥಿಗಳು ಇನ್ನೂ ಕ್ಯಾಂಪಸ್‍ಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇಂಫಾಲದಿಂದ ಹೊರ ಹೋಗುವ ಎಲ್ಲ ವಿಮಾನಗಳಲ್ಲಿ ಮುಂದಿನ ಕೆಲ ದಿನಗಳವರೆಗೆ ಬುಕ್ಕಿಂಗ್ ಭರ್ತಿಯಾಗಿದ್ದು, ಇಂಫಾಲದಿಂದ ಕೊಲ್ಕತ್ತಾಗೆ ವಿಮಾನಯಾನ ದರ 22 ಸಾವಿರ ರೂಪಾಯಿಯಿಂದ 30 ಸಾವಿರ ರೂಪಾರಿಗೆ ಹೆಚ್ಚಿದೆ.
ಮಹಾರಾಷ್ಟ್ರದ ಸುಮಾರು 22 ವಿದ್ಯಾರ್ಥಿಗಳು ಮಣಿಪುರದಲ್ಲಿದ್ದು, ಇವರನ್ನು ಮೊದಲು ಅಸ್ಸಾಂಗೆ ಹಾಗೂ ಆ ಬಳಿಕ ತವರು ರಾಜ್ಯಕ್ಕೆ ಕರೆ ತರಲು ಅಲ್ಲಿನ ಸರ್ಕಾರ ಯೋಚಿಸಿದೆ. ಈಗಾಗಲೇ ಈ ಪೈಕಿ 14 ಮಂದಿಯನ್ನು ಇಂಫಾಲದ ಶಿವಸೇನೆ ಕಚೇರಿಗೆ ಕರೆ ತರಲಾಗಿದೆ ಎಂದು ಸಿಎಂ ಏಕನಾಥ್ ಶಿಂಧೆ ಹೇಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಕೂಡಾ ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿ, ಮಣಿಪುರದಿಂದ ತಮ್ಮ ರಾಜ್ಯದ ವಿದ್ಯಾರ್ಥಿಗಳನ್ನು ತಕ್ಷಣ ಕರೆ ತರಲು ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ವಿವಿಧ ರಾಜ್ಯಗಳ ನೂರಾರು ವಿದ್ಯಾರ್ಥಿಗಳು ಆತಂಕದಿಂದ ಇದ್ದು, ನೆರವಿಗಾಗಿ ಕಾಯುತ್ತಿದ್ದಾರೆ.







