ದ.ಕ. ಜಿಲ್ಲೆಯ ಎಂಟು ಕ್ಷೇತ್ರಗಳೂ ಕಾಂಗ್ರೆಸ್ ಪಾಲಾಗುವುದು ಖಚಿತ: ಫಾರೂಕ್ ಉಳ್ಳಾಲ್

ಮಂಗಳೂರು: ಅಗತ್ಯ ವಸ್ತುಗಳ ಬೆಲೆಯೇರಿಕೆ ಮತ್ತು ಭ್ರಷ್ಟಾಚಾರವನ್ನು ಮೂಲದೇಯ್ಯವನ್ನಾಗಿ ರಾಜ್ಯದ ಬೊಕ್ಕಸ ಬರಿದಾಗಿಸಿರುವ ಬಿಜೆಪಿ ಸರಕಾರದ ವಿರುದ್ಧ ಜನಾಕ್ರೋಶ ದ.ಕ. ಜಿಲ್ಲೆಯ ಉದ್ದಗಲಕ್ಕೂ ಎದ್ದು ಕಾಣುತ್ತಿವೆ. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ. ಉಳ್ಳಾಲದಲ್ಲಂತೂ ಯು.ಟಿ.ಖಾದರ್ ಅಭೂತಪೂರ್ವ ದಾಖಲೆಯೊಂದಿಗೆ ಗೆದ್ದು ಬರಲಿದ್ದಾರೆ ಎಂದು ಕೆ.ಪಿ.ಸಿ.ಸಿ ಸಂಯೋಜಕ ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಉಸ್ತುವಾರಿ ಫಾರೂಕ್ ಉಳ್ಳಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯನವರ ಸರಕಾರ ಜಾರಿಗೆ ತಂದ ಜನಪರ ಯೋಜನೆಗಳಿಗೆ ಕತ್ತರಿ ಪ್ರಯೋಗಿಸಿರುವ ಬೊಮ್ಮಾಯಿ ಸರಕಾರದ ಜನವಿರೋಧಿ ಆಡಳಿತಕ್ಕೆ ಬೇಸತ್ತು ಹೋಗಿರುವ ತುಳುನಾಡಿನ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಚುನಾಯಿಸಲಿದ್ದಾರೆ. ಹಿಂದುತ್ವದ ವಾರೀಸುದಾರರು ಎಂಬ ಬಿಜೆಪಿಯು ಹಿಂದುತ್ವಕ್ಕೆ ಜೀವಮಾನವನ್ನೇ ಮುಡಿಪಾಗಿಟ್ಟ ಸತ್ಯಜಿತ್ ಸುರತ್ಕಲ್, ಮಹೇಶ್ ತಿಮರೊಡಿ, ಅರುಣ್ ಪುತ್ತಿಲರನ್ನು ನಿರ್ಲಕ್ಷಿಸಿದ ಪರಿಣಾಮ ಹಿಂದುತ್ವದ ಕಟ್ಟಾಳುಗಳೇ ಬಿಜೆಪಿ ವಿರುದ್ಧ ಸೆಟೆದು ನಿಂತಿರುವುದರಿಂದ ಬಿಜೆಪಿ ಹೀನಾಯ ಸೋಲು ಕಾಣುವುದು ಖಚಿತ ಎಂದು ಫಾರೂಕ್ ಉಳ್ಳಾಲ್ ಹೇಳಿದ್ದಾರೆ
ಯುಟಿ ಖಾದರ್, ರಮಾನಾಥ್ ರೈ ಮತ್ತು ಜೆ.ಆರ್ .ಲೋಬೋರವರು ನೀಡಿದ ಶಾಶ್ವತ ಕೊಡುಗೆಗಳು, ಸಾಮರಸ್ಯದ ಜನ ಜೀವನಕ್ಕಾಗಿ ಸ್ಪಂದಿಸುತ್ತಿದ್ದ ರೀತಿ, ಈ ನೆಲದಲ್ಲಿ ಮತ್ತೆ ನೆಲೆ ನಿಲ್ಲ ಬೇಕೆಂಬ ಪ್ರತೀಕ್ಷೆ ಮತದಾರರಲ್ಲಿ ಜಾಗೃತಗೊಂಡಿವೆ. ಸರಳತೆ, ಅಭಿವೃಧಿಗೆ ಆದ್ಯತೆ ಕೊಡುವ ಕ್ರಿಯಾಶೀಲ ಸಾಧಕರು, ಸಾಮರಸ್ಯದ ಪ್ರತಿಪಾದಕರು ನಮ್ಮ ಶಾಸಕರಾಗಬೇಕೆಂಬ ಮತದಾರರ ಹಂಬಲಕ್ಕೆ ಮನ್ನಣೆ ನೀಡಿರುವ ಕಾಂಗ್ರೆಸ್ ಜನರ ನಡುವೆಯೇ ಇದ್ದು, ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ, ಸಮಾಜ ಸೇವೆಯನ್ನು ಉಸಿರಾಗಿಸಿಕೊಂಡ ಅಶೋಕ್ ರೈ ಅವರನ್ನು ಪುತ್ತೂರಿನಲ್ಲಿ, ಮಿಥುನ್ ರೈಯವರನ್ನು ಮೂಡಬಿದ್ರೆಯಲ್ಲಿ, ರಕ್ಷಿತ್ ಶಿವರಾಮ್ ರನ್ನು ಬೆಳ್ತಂಗಡಿಯಲ್ಲಿ, ಸುಳ್ಯದಲ್ಲಿ ಕೃಷ್ಣಪ್ಪರನ್ನು ಹಾಗೂ ಮಂಗಳೂರು ಉತ್ತರದಲ್ಲಿ ಇನಾಯತ್ ಅಲಿಯವರನ್ನು ಕಣಕ್ಕಿಳಿಸಿರುವುದು ಹೊಸ ಮುಖ ಮತ್ತು ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಕಾಂಗ್ರೆಸ್ ಸೂಕ್ತ ಪ್ರಾತಿನಿಧ್ಯ ನೀಡಿದಂತಾಗಿದೆ ಎಂಬ ಅಭಿಪ್ರಾಯ ಮತದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಫಾರೂಕ್ ಉಳ್ಳಾಲ್ ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.