ಮತ್ತೊಂದು ಏರ್ಲೈನ್ ಮುಳುಗಡೆ, ವಿಮಾನಯಾನ ಕ್ಷೇತ್ರದ ಬಿಕ್ಕಟ್ಟುಗಳೇನು?

ವಿಮಾನಯಾನ ಸಂಸ್ಥೆಗಳು ಮುಚ್ಚುವ ಸಂದರ್ಭದಲ್ಲಿ ನೌಕರರು ಮತ್ತು ಪ್ರಯಾಣಿಕರ ಬಾಕಿಗಳನ್ನು ಪೂರೈಸಲು ಕಾರ್ಪಸ್ ನಿಧಿಯನ್ನು ಲಾಕ್ ಮಾಡುವ ವ್ಯವಸ್ಥೆಯಾಗಬೇಕು. ಬಿಜೆಪಿ ಸರಕಾರ ಮಧ್ಯರಾತ್ರಿ ಯಲ್ಲಿ ನೋಟ್ ಬ್ಯಾನ್ ಮಾಡಿದಂತೆ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನ ಹಾರಾಟ ಸ್ಥಗಿತಗೊಳಿಸಿ, ಪ್ರಯಾಣಿಕರನ್ನು ಸಂಕಷ್ಟಕ್ಕೆ ದೂಡುವಂತಾಗಬಾರದು.
ಕಡಿಮೆ ಬೆಲೆಯಲ್ಲಿ ವಿಮಾನ ಹಾರಾಟ ಸೇವೆಗೆ ಜನಪ್ರಿಯವಾಗಿದ್ದ ವಾಡಿಯಾ ಗ್ರೂಪ್ನ ಸಂಸ್ಥೆ ಗೋಫಸ್ಟ್ ಇನ್ಸಾಲ್ವೆನ್ಸಿ ನಿರ್ಣಯಕ್ಕೆ ಮೊರೆ ಹೋಗಿದೆ. ಅಂದರೆ ದಿವಾಳಿ ಪತ್ರವನ್ನು ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (ಓಅಐಖಿ) ಮುಂದೆ ಸಲ್ಲಿಸಿದೆ. ಮೊದಲು ಮೇ 3ರಿಂದ 5ರವರೆಗೆ ವಿಮಾನ ಹಾರಾಟ ರದ್ದುಗೊಳಿಸಿದ್ದ ಸಂಸ್ಥೆ, ಈಗಮೇ 9ರವರೆಗೂ ಟಿಕೆಟ್ ಬುಕಿಂಗ್ ರದ್ದು ಮಾಡಿದೆ ಎಂದು ಕೆಲವು ವರದಿಗಳು ಹೇಳುತ್ತಿದ್ದರೆ, ಮತ್ತೆ ಕೆಲವು ವರದಿಗಳ ಪ್ರಕಾರ, ಮೇ 15ರವರೆಗೂ ಗೋಫಸ್ಟ್ ವಿಮಾನ ಹಾರಾಟ ಇರುವುದಿಲ್ಲ.
ಆದರೆ ಮೇ 15ರ ಬಳಿಕವಾದರೂ ಗೋ ಫಸ್ಟ್ ವಿಮಾನಗಳು ಹಾರಾಟ ಆರಂಭಿಸುತ್ತವೆಯೆ ಎಂಬುದು ಸದ್ಯಕ್ಕೆ ಖಾತ್ರಿಯಿಲ್ಲ. ಟಿಕೆಟ್ ಬುಕಿಂಗ್ ರದ್ದುಗೊಂಡ ಪ್ರಯಾಣಿಕರಿಗೆ ಹಣ ಮರಳಿಸಲು ಸಂಸ್ಥೆ ಮುಂದಾಗಿದೆ ಎನ್ನಲಾಗಿದೆ. ಹೇಳಿಕೊಳ್ಳುವಂಥ ಲಾಭ ಅಥವಾ ನಷ್ಟ ಇಲ್ಲದೆ ನಡೆಯುತ್ತಿದ್ದ ಸಂಸ್ಥೆ ಈಗ ಬಹುದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಗೋ ಫಸ್ಟ್ ಏರ್ಲೈನ್ಸ್ ಸಂಸ್ಥೆ ಇನ್ನೂ ದಿವಾಳಿ ಎಂದು ಘೋಷಿಸಿಕೊಂಡಿಲ್ಲ. ಇನ್ಸಾಲ್ವೆನ್ಸಿ ರೆಸಲ್ಯೂಷನ್ ಮಾತ್ರ ಕೈಗೊಂಡಿದೆ. ಈ ನಡುವೆಯೇ, ವಿಮಾನ ಹಾರಾಟ ಸೇವೆಯಿಂದ ಹಿಂದೆಗೆಯುವುದಿಲ್ಲ ಎಂದು ವಾಡಿಯಾ ಗ್ರೂಪ್ ಹೇಳಿದೆಯೆಂಬ ವರದಿಗಳೂ ಇವೆ.
ಗೋ ಫಸ್ಟ್ ಸಂಸ್ಥೆ ಶುರುವಾದದ್ದು 2005ರ ನವೆಂಬರ್ 4ರಂದು. ಅಂದರೆ 17 ವರ್ಷಗಳ ಕೆಳಗೆ. ಗೋ ಫಸ್ಟ್ ವಿಮಾನಗಳಲ್ಲಿ ದಿನವೂ 30,000 ಪ್ರಯಾಣಿಕರು ಸಂಚರಿಸುತ್ತಾರೆ ಎನ್ನುತ್ತದೆ ಒಂದು ವರದಿ. ಗೋ ಫಸ್ಟ್ ಸಂಸ್ಥೆ ವಿವಿಧ ಬ್ಯಾಂಕುಗಳಿಗೆ 6,521 ಕೋಟಿ ರೂ. ಸಾಲ ಬಾಕಿ ಉಳಿಸಿಕೊಂಡಿದೆ. ಗೋ ಫಸ್ಟ್ ಏರ್ಲೈನ್ಸ್ ಆರೋಪಿಸಿರುವ ಪ್ರಕಾರ, ಅದಕ್ಕೆ ಕಂಟಕವಾಗಿದ್ದು ಅದರ ಇಂಜಿನ್. ಅಮೆರಿಕದ ಪ್ರಾಟ್ ಆ್ಯಂಡ್ ವಿಟ್ನಿ ಕಂಪೆನಿಯ ಇಂಜಿನ್ಗಳು ಗೋ ಫಸ್ಟ್ಗೆ ಭಾರೀ ಸಮಸ್ಯೆ ತಂದಿಟ್ಟಿವೆ. ಇಂಜಿನ್ ವೈಫಲ್ಯದಿಂದ 28 ವಿಮಾನಗಳು ಸ್ಥಗಿತಗೊಂಡಿವೆ.
ಹೊಸ ಅಥವಾ ಬದಲಿ ಇಂಜಿನ್ಗಳನ್ನು ಒದಗಿಸಲು ಎಷ್ಟೇ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಬಹಳ ದಿನಗಳಿಂದ ಈ 28 ವಿಮಾನ ಗಳು ನಿಂತುಹೋಗಿರುವುದು ಸಂಸ್ಥೆಗೆ ಹಣಕಾಸು ಸಂಕಷ್ಟ ತಂದಿಟ್ಟಿದೆ.ಹಾಗೆ ನೋಡಿದರೆ, ಪಿ ಆ್ಯಂಡ್ ಡಬ್ಲ್ಯು ಪ್ರತಿಷ್ಠಿತ ಕಂಪೆನಿ. ಅಮೆರಿಕದ ಮಿಲಿಟರಿಯಿಂದ ಹಿಡಿದು ವಿಶ್ವದ ಹಲವು ಏರ್ಲೈನ್ಸ್ ಸಂಸ್ಥೆಗಳಿಗೆ ಇಂಜಿನ್ ಪೂರೈಕೆ ಮಾಡುತ್ತದೆ. ಇತ್ತೀಚೆಗೆ ಅದರ ಇಂಜಿನ್ ವೈಫಲ್ಯದ ಬಗ್ಗೆ ದೂರುಗಳು ಹೆಚ್ಚಾಗಿ ಬರುತ್ತಿವೆ ಎನ್ನಲಾಗಿದೆ.
ಇಂಜಿನ್ಗಳ ದುರಸ್ತಿಗೆ ಬೇಕಾದ ಬಿಡಿಭಾಗಗಳೂ ಪೂರೈಕೆಯಾ ಗುತ್ತಿಲ್ಲ ಎಂಬ ದೂರುಗಳಿವೆ. ಆದರೂ, ದೋಷಪೂರಿತ ಇಂಜಿನ್ಗಳಿಂದಾಗಿ ವಿಮಾನಗಳು ನಿಂತುಹೋಗಿರುವುದರಿಂದ ನಷ್ಟವಾಗಿದೆ ಎಂಬ ಗೋ ಫಸ್ಟ್ ಆರೋಪಗಳನ್ನು ಪ್ರಾಟ್ ಮತ್ತು ವಿಟ್ನಿ ನಿರಾಕರಿ ಸಿದೆ ಎಂದು ಹೇಳಲಾಗುತ್ತಿದೆ. ಗೋ ಫಸ್ಟ್ ವಿಮಾನಗಳು ರದ್ದಾಗಿರುವ ಕಾರಣ ದೇಶಾದ್ಯಂತ ವಿಮಾನ ಯಾನ ದುಬಾರಿಯಾಗುವ ಸಾಧ್ಯತೆಗಳಿವೆ. ಅದರಲ್ಲೂ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಈ ಸಾಧ್ಯತೆ ಇನ್ನೂ ಹೆಚ್ಚು ಎನ್ನಲಾಗಿದೆ. ಪ್ರಯಾಣಿಕರು ಬೇರೆ ಏರ್ಲೈನ್ಸ್ ಟಿಕೆಟ್ಗಾಗಿ ಶೇ.20ರಂದ 25ರಷ್ಟು ಹೆಚ್ಚುವರಿ ದರ ಪಾವತಿಸಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಒಂದು ವೇಳೆ ಗೋ ಫಸ್ಟ್ ಮುಳುಗಡೆಯಾದರೆ ಸಾಲದಾತರ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಏನೇ ವಸೂಲಾತಿ ನಡೆದರೂ ಅದು ಸಾಲದ ಮೊತ್ತದ ಶೇ. 25ರಿಂದ 30ನ್ನು ದಾಟದು ಎಂಬುದು ಒಂದು ಲೆಕ್ಕಾಚಾರ. ಈಗಾಗಲೇ ಸಂಸ್ಥೆ ದಿವಾಳಿತನ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಇನ್ನು ಮುಂದೆ ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸಲು ಸಾಧ್ಯವಿಲ್ಲ ಎಂದಿದೆ. ಗೋ ಫಸ್ಟ್ 2022ರ ಆರ್ಥಿಕ ವರ್ಷದಲ್ಲಿ ಇಲ್ಲಿಯವರೆಗಿನ ತನ್ನ ಅತ್ಯಧಿಕ ವಾರ್ಷಿಕ ಆರ್ಥಿಕ ನಷ್ಟವನ್ನು ವರದಿ ಮಾಡಿದೆ.
ತನ್ನ ಕಾರ್ಯಾಚರಣೆಗಳಿಗಾಗಿ ಗೋ ಫಸ್ಟ್ ಆರಂಭದಲ್ಲಿ ಸರಕಾರದ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಅಐಉS) ಅಡಿಯಲ್ಲಿ 600 ಕೋಟಿ ರೂ. ಸಾಲ ಪಡೆದುಕೊಂಡಿತ್ತು. ವಾಡಿಯಾ ಗ್ರೂಪ್ ಕಳೆದ 15 ತಿಂಗಳಲ್ಲಿ ಸುಮಾರು 3,000 ಕೋಟಿ ಹಣ ಹೂಡಿಕೆ ಮಾಡಿತ್ತು ಎನ್ನುತ್ತವೆ ವರದಿಗಳು. ಹೀಗಿದ್ದೂ ಕಂಪೆನಿ ಈಗ ದಿವಾಳಿ ಹಂತಕ್ಕೆ ಬಂದು ನಿಂತಿದೆ.
ಈಗ ಬ್ಯಾಂಕ್ಗಳಿಗೆ ಅದು ಪಾವತಿಸಬೇಕಿರುವ ಸಾಲದ ಬಾಕಿಯ ಕಥೆಯೇನು ಎಂಬ ಪ್ರಶ್ನೆ ಎದ್ದಿದೆ. ದಿವಾಳಿ ಪತ್ರವನ್ನು ಅದು ಸೆಕ್ಷನ್ 7 ಮತ್ತು 9ರ ಬದಲು ಸೆಕ್ಷನ್ 10ರ ಅಡಿಯಲ್ಲಿ ಸಲ್ಲಿಸಿದೆ. ಸೆಕ್ಷನ್ 7 ಮತ್ತು 9ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರೆ ಸಾಲ ನೀಡಿದವರು ಎನ್ಸಿಎಲ್ಟಿ ಮೂಲಕ ಗೋ ಫಸ್ಟ್ನಿಂದ ಸಾಲ ವಸೂಲಾತಿ ಮಾಡಬಹುದಿತ್ತು. ಆದರೆ, ಸೆಕ್ಷನ್ 10ರ ಅಡಿಯಲ್ಲಿ ಅರ್ಜಿ ಹಾಕಲಾಗಿರುವುದರಿಂದ, ಇದರಲ್ಲಿ ಗೋಫಸ್ಟ್ ಖುದ್ದಾಗಿ ಪರಿಹಾರ ಪಡೆಯಲು ಅವಕಾಶ ಸಿಗುತ್ತದೆ ಎಂದು ವಿತ್ತವರದಿಗಳು ಹೇಳುತ್ತಿವೆ.
ಹಾಗೆ ನೋಡಿದರೆ, ಭಾರತೀಯ ವಿಮಾನಯಾನ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿರುವುದು ಇದೇ ಮೊದಲೇನೂ ಅಲ್ಲ. ಇದಕ್ಕೂ ಮುನ್ನ ಇನ್ನೂ ಎರಡು ದೊಡ್ಡ ವಿಮಾನಯಾನ ಸಂಸ್ಥೆಗಳು ಮುಳುಗಿವೆ. ಈ ಒಂದು ದಶಕದಲ್ಲಿ ಎರಡು ದೈತ್ಯ ಏರ್ಲೈನ್ ಸಂಸ್ಥೆಗಳು ದಿವಾಳಿಯಾಗಿ ಹೋಗಿವೆ. ‘ಕಿಂಗ್ ಫಿಶರ್ ಏರ್ಲೈನ್ಸ್ ಮತ್ತು ಜೆಟ್ ಏರ್ವೇಸ್ ಗಳು ಭಾರೀ ನಷ್ಟಕ್ಕೆ ಒಳಗಾಗಿ ದಿವಾಳಿಯಾದವು.
ವಿಜಯ ಮಲ್ಯ ಅವರ ವಿಮಾನಯಾನ ಸಂಸ್ಥೆ ‘ಕಿಂಗ್ ಫಿಶರ್ ಏರ್ಲೈನ್ಸ್’ 2003ರಲ್ಲಿ ಪ್ರಾರಂಭವಾಯಿತು. ಕೆಲವೇ ಸಮಯದಲ್ಲಿ ದೊಡ್ಡ ಕಂಪೆನಿಯಾಗಿಯೂ ಹೊರಹೊಮ್ಮಿತು. 2008ರಲ್ಲಿ ಅದು ಡೆಕ್ಕನ್ ಏರ್ ಅನ್ನು ಖರೀದಿಸಿತು. ಅಂದಿನಿಂದ ಕಂಪೆನಿಯ ಮೇಲಿನ ಹೊರೆ ಹೆಚ್ಚುತ್ತಲೇ ಇತ್ತು. ಸಾಲ ಹೆಚ್ಚಾದ ನಂತರ 2012ರಲ್ಲಿ ಕಂಪೆನಿಯ ಏರ್ಲೈನ್ಸ್ ಪರವಾನಿಗೆ ರದ್ದುಗೊಳಿಸಲಾಯಿತು. 2014ರಲ್ಲಿ ಅದನ್ನು ದಿವಾಳಿ ಎಂದು ಘೋಷಿಸಲಾಯಿತು.
ಜೆಟ್ ಏರ್ವೇಸ್ 1992ರಲ್ಲಿ ಪ್ರಾರಂಭವಾಗಿದ್ದ ಸಂಸ್ಥೆ. 2006ರಲ್ಲಿ ಏರ್ ಸಹಾರಾವನ್ನು ಸ್ವಾಧೀನಪಡಿಸಿಕೊಂಡ ನಂತರ ಕಂಪೆನಿ ಮೊದಲ ಬಾರಿಗೆ ಅಂತರ್ರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. 2012ರಹೊತ್ತಿಗೆ, ಇಂಡಿಗೋ ಅಗ್ಗದ ವಿಮಾನ ಸೇವೆಗಳನ್ನು ಒದಗಿಸುವ ಮೂಲಕ ಜೆಟ್ ಏರ್ವೇಸ್ನ ದೊಡ್ಡ ಮಾರುಕಟ್ಟೆ ಪಾಲನ್ನು ವಶಪಡಿಸಿಕೊಂಡಿತು.
ಡಿಸೆಂಬರ್ 2018ರ ಹೊತ್ತಿಗೆ ಕಂಪೆನಿಯ ಒಟ್ಟು 124 ವಿಮಾನಗಳಲ್ಲಿ 3ರಿಂದ 4 ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದವು. ನಂತರ ಎಪ್ರಿಲ್ 2019ರಲ್ಲಿ ಕಂಪೆನಿ ತಾನು ದಿವಾಳಿಯಾಗಿರುವುದಾಗಿ ಘೋಷಿಸಿತು. ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಕೂಡ ಬಹಳಕಷ್ಟದ ಹಂತವನ್ನು ಮುಟ್ಟಿತ್ತು. ದಿವಾಳಿ ಆಗೋದೊಂದೇ ಬಾಕಿಯಿತ್ತು.
ಟಾಟಾ ಗ್ರೂಪ್ ಖರೀದಿಸದೇ ಇದ್ದಿದ್ದರೆ ಈ ವೇಳೆಗೆ ಏರ್ ಇಂಡಿಯಾ ಕೂಡ ಮುಳುಗಿ ಹೋಗುತ್ತಿತ್ತು. ಕಿಂಗ್ಫಿಶರ್ ಏರ್ಲೈನ್ಸ್ ಮತ್ತು ಜೆಟ್ ಏರ್ವೇಸ್ ಅಲ್ಲದೆ, ಕಳೆದ 30 ವರ್ಷಗಳಲ್ಲಿ ದಮಾನಿಯಾ ಏರ್ವೇಸ್, ಎನ್ಇಪಿಸಿ ಏರ್ಲೈನ್ಸ್, ಏರ್ ಡೆಕ್ಕನ್, ಏರ್ ಸಹಾರಾ, ಪ್ಯಾರಾಮೌಂಟ್, ಏರ್ ಕೋಸ್ಟಾ, ಏರ್ ಪೆಗಾಸಸ್, ಏರ್ ಕಾರ್ನಿವಲ್, ಟ್ರು ಜೆಟ್ ಮೊದಲಾದ ಭಾರತದ ಹಲವಾರು ಸಣ್ಣ ವಿಮಾನಯಾನ ಸಂಸ್ಥೆಗಳೂ ವಿಫಲವಾಗಿವೆ.
2008ರಲ್ಲಿ ಉಂಟಾದ ಆರ್ಥಿಕತೆ ಕುಸಿತ ಪ್ರಮುಖ ವಿಮಾನಯಾನ ಸಂಸ್ಥೆಗಳ ಪಾಲಿಗೆ ಕಂಟಕ ತಂದಿಟ್ಟಿತು. ಕಿಂಗ್ ಫಿಶರ್, ಜೆಟ್ ಏರ್ವೇಸ್ನಂತಹ ಸಂಸ್ಥೆಗಳು ನೆಲ ಕಚ್ಚುವ ಮೊದಲೂ ಅವುಗಳು ಎಂಥ ದುಸ್ಥಿತಿಗೆ ಮುಟ್ಟಿದ್ದವು ಎಂಬುದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯಕ್ಕೆ (ಡಿಜಿಸಿಎ) ಗೊತ್ತಿತ್ತು. ಆದರೆ ಅಂಥ ವರದಿಗಳನ್ನು ಅದು ಅಲಕ್ಷಿಸುವುದೂ ಸಾಮಾನ್ಯ ಎಂಬುದು ಪರಿಣತರ ವಾದ. ಡಿಜಿಸಿಎ ಸೂಚಿಸುವ ಪ್ರಕಾರ, ನಾಗರಿಕ ವಿಮಾನಯಾನ ಪ್ರಾರಂಭಿಸಲು ಹಣಕಾಸು, ಸಿಬ್ಬಂದಿ ಸಂಖ್ಯೆ ಮತ್ತು ಮಾರ್ಗದ ಕುರಿತ ಸ್ಪಷ್ಟ ಚಿತ್ರಣವನ್ನು ನೀಡುವುದು ತೀರಾ ಕನಿಷ್ಠ ಅಗತ್ಯವಾಗಿರುತ್ತದೆ. ಆದರೆ, ಡಿಜಿಸಿಎ ಕೃಪಾಕಟಾಕ್ಷವಿದ್ದರೆ ಆರ್ಥಿಕ ಭದ್ರತೆ, ಕನಿಷ್ಠ ಸಂಖ್ಯೆ ಯ ಪೈಲಟ್ಗಳು, ಇಂಜಿನಿಯರ್ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ಇಲ್ಲದೆಯೂ ಸಂಸ್ಥೆಗಳು ದೊಡ್ಡ ಯೋಜನೆ ಘೋಷಿಸುತ್ತವೆ.
ವಿಮಾನ ಯಾನ ಆರಂಭವಾದ ಬಳಿಕವಾದರೂ ಆ ಸಂಸ್ಥೆ ಕೊಟ್ಟಿದ್ದ ಅಂಕಿ ಅಂಶಕ್ಕೂ ವಾಸ್ತವಕ್ಕೂ ತಾಳೆಯಾಗುತ್ತದೆಯೆ ಎಂದು ಯಾರಾದರೂ ಪರಿಶೀಲಿಸುತ್ತಾರೆಯೆ? ಇತರ ದೇಶಗಳಿಗೆ ಹೋಲಿಸಿದರೆ ಭಾರತ ವಿಮಾನಗಳಿಗೆ ಅತಿ ಹೆಚ್ಚು ಗುತ್ತಿಗೆ ಶುಲ್ಕವನ್ನು ಏಕೆ ಪಾವತಿಸುತ್ತದೆ ಎಂಬುದನ್ನು ಯಾರಾದರೂ ಪರಿಶೀಲಿಸಿದ್ದಾರೆಯೆ? ‘ನಿಯಂತ್ರಕ’ ಎಂದು ಕರೆಯಲ್ಪಡುವ ಡಿಜಿಸಿಎ, ತಪ್ಪು ಮಾಹಿತಿಯೊಂದಿಗೆ ವಿಮಾನಯಾನ ಆರಂಭಿಸುವ ಸಂಸ್ಥೆಗಳ ವಿರುದ್ಧ ಎಂದಾದರೂ ಕ್ರಮ ಕೈಗೊಂಡಿದೆಯೇ? ಇಂಥ ಪ್ರಶ್ನೆಗಳನ್ನು ವಿಮಾನಯಾನ ಕ್ಷೇತ್ರದ ಪರಿಣಿತರು ಕೇಳುತ್ತಾರೆ.
ವಿಮಾನಯಾನ ಸಂಸ್ಥೆಗಳಿಗೂ ಡಿಜಿಸಿಎ ಎಂಬುದು ವಿಮಾನ ಯಾನ ಸಚಿವಾಲಯದೊಡನೆ ಸಂಪರ್ಕಗೊಳ್ಳುವವರೆಗೆ ಬೇಕಿರುವು ದಷ್ಟೆ ಎಂಬುದು ಗೊತ್ತಾಗಿಬಿಟ್ಟಿದೆ. ಭಾರತದ ಎಲ್ಲಾ ವಿಮಾನಯಾನ ಸಂಸ್ಥೆಗಳ ಹಣಕಾಸು ಲೆಕ್ಕಪರಿಶೋಧನೆ ಮಾಡಿರುವ ಡಿಜಿಸಿಎ, ಆಡಿಟ್ ವರದಿಗಳನ್ನು ಪ್ರಕಟಿಸಿದೆಯೇ ಎಂಬ ಪ್ರಶ್ನೆಯನ್ನೂ ಪರಿಣಿತರು ಕೇಳುತ್ತಾರೆ. ಲೀಸ್ ಶುಲ್ಕ, ಇಂಧನ ಶುಲ್ಕ ಪಾವತಿಸಲಾಗದ ಸ್ಥಿತಿಗೂ ಹಲವು ವಿಮಾನಯಾನ ಸಂಸ್ಥಗಳು ತಲುಪಿರುವುದು ಅವುಗಳ ಹದಗೆಟ್ಟ ಆರ್ಥಿಕ ಸ್ಥಿತಿಯ ಸೂಚನೆ. ಹಾಗೆಯೇ ಆಪರೇಷನಲ್ ಕಾರಣಗಳಿಂದ ವಿಮಾನಗಳ ರದ್ದತಿ ಎಂಬುದೂ ಇದನ್ನೇ ಸ್ಪಷ್ಟವಾಗಿ ಹೇಳುತ್ತದೆ. ಈ ಆಪರೇಷನಲ್ ಕಾರಣ ಎಂದರೆ ಸರಳವಾಗಿ, ಸಿಬ್ಬಂದಿ ಕೊರತೆ ಎಂದರ್ಥ ಎನ್ನುತ್ತಾರೆ ತಜ್ಞರು.
ಸಿಬ್ಬಂದಿ ಕೊರತೆಯಿಂದಾಗಿ ವಿಮಾನ ರದ್ದತಿಗೆ ಸಂಬಂಧಿಸಿದ ಡೇಟಾವನ್ನು ಡಿಜಿಸಿಎ ಪ್ರಕಟಿಸುತ್ತದೆಯೇ? ಯಾವುದೇ ವಿಮಾನಯಾನ ಸಂಸ್ಥೆ ಅಡೆತಡೆಗಳಿಲ್ಲದೆ ನಿರಂತರ ನಿಗದಿತ ಕಾರ್ಯಾಚರಣೆಗಳಿಗೆ ಸಾಕಷ್ಟು ಸಂಖ್ಯೆಯ ಸಿಬ್ಬಂದಿ ತನ್ನ ಬಳಿ ಇದೆ ಎಂದು ತೋರಿಸುವವರೆಗೆ ಅವು ಹೆಚ್ಚಿನ ವಿಮಾನಗಳನ್ನು ಕಾರ್ಯಾಚರಿಸದಂತೆ ತಡೆಯುವ ದಿಟ್ಟ ಹೆಜ್ಜೆಯನ್ನು ಡಿಜಿಸಿಎ ತೆಗೆದುಕೊಳ್ಳುತ್ತದೆಯೇ ಎಂಬ ಪ್ರಶ್ನೆಗಳನ್ನೂ ಅವರು ಎತ್ತುತ್ತಾರೆ.
ಹಾಗೆಯೇ ಅವರು ಮಾಡುವ ಮುಖ್ಯ ಒತ್ತಾಯಗಳೆಂದರೆ, ವಿಫಲವಾದ ಏರ್ಲೈನ್ ಯಾವುದೇ ಅಧಿಕಾರಿ ಮತ್ತೊಂದು ಏರ್ಲೈನ್ಸ್ನಲ್ಲಿ ವ್ಯವಸ್ಥಾಪಕ ಹುದ್ದೆ ಪಡೆಯಲು ಅವಕಾಶ ಇರಬಾರದು.ವಿಮಾನಯಾನ ಸಂಸ್ಥೆಗಳು ಮುಚ್ಚುವ ಸಂದರ್ಭದಲ್ಲಿ ನೌಕರರು ಮತ್ತು ಪ್ರಯಾಣಿಕರ ಬಾಕಿಗಳನ್ನು ಪೂರೈಸಲು ಕಾರ್ಪಸ್ ನಿಧಿಯನ್ನು ಲಾಕ್ ಮಾಡುವ ವ್ಯವಸ್ಥೆಯಾಗಬೇಕು. ಬಿಜೆಪಿ ಸರಕಾರ ಮಧ್ಯರಾತ್ರಿ ಯಲ್ಲಿ ನೋಟ್ ಬ್ಯಾನ್ ಮಾಡಿದಂತೆ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನ ಹಾರಾಟ ಸ್ಥಗಿತಗೊಳಿಸಿ, ಪ್ರಯಾಣಿಕರನ್ನು ಸಂಕಷ್ಟಕ್ಕೆ ದೂಡುವಂತಾಗಬಾರದು.
ಕೇವಲ ಸಚಿವರನ್ನು ಖುಷಿಪಡಿಸುವುದರಿಂದ ಮತ್ತು ಸರಕಾರದ ಅಹಮ್ಮಿಗೆ ಮಣೆ ಹಾಕುವುದರಿಂದ ವಿಮಾನಯಾನ ಸಂಸ್ಥೆ ಮುಳು ಗುವುದನ್ನು ತಡೆಯಲು ಸಾಧ್ಯವಿಲ್ಲ. ಕೋವಿಡ್ ನಂತರವಂತೂ ಸ್ಥಿತಿ ತೀರಾ ಹದಗೆಟ್ಟಿದೆ ಎಂಬುದೂ ಈಗಾಗಲೇ ಗೊತ್ತಾಗಿರುವ ವಿಚಾರ. ಏವಿಯೇಷನ್ಗೆ ಬಳಸುವ ಇಂಧನ, ಗುತ್ತಿಗೆ ಅಥವಾ ಬಾಡಿಗೆ ಹಾಗೂ ವಿಮಾನ ನಿಲ್ದಾಣದ ಶುಲ್ಕಗಳು-ಈ ಮೂರು ವಿಮಾನ ಯಾನ ಸಂಸ್ಥೆಗೆ ಇರುವ ಪ್ರಮುಖ ವೆಚ್ಚಗಳು. ಈ ಮೂರರ ವೆಚ್ಚವೇ ಒಟ್ಟು ವೆಚ್ಚದ ಶೇ. 55 - 60ರವರೆಗೆ ಆಗುತ್ತದೆ. ಇನ್ನು ಸಿಬ್ಬಂದಿ ವೇತನವೂ ದೊಡ್ಡದೇ. ಇಂಧನ ದರ ಏರುತ್ತಲೇ ಇದೆ. ಜೊತೆಗೆ ವಿಮಾನಯಾನ ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ ಇದೆ. ?
ತಜ್ಞರು ಪ್ರತಿಪಾದಿಸುವ ಪ್ರಕಾರ, ವಿಮಾನಯಾನ ವ್ಯವಸ್ಥೆಯಲ್ಲಿ ತುರ್ತಾಗಿ ಬೇಕಿರುವುದು ಪಾರದರ್ಶಕತೆ ಮತ್ತು ಹೊಣೆಗಾರಿಕೆ. ವಿಮಾನಯಾನ ಮಾಲಕರು ಮತ್ತು ಪ್ರಮೋಟರ್ಗಳು ಮಾತ್ರವಲ್ಲದೆ ನಾಗರಿಕ ವಿಮಾನಯಾನ ಸಚಿವಾಲಯ,ಡಿಜಿಸಿಎ ಅಧಿಕಾರಿಗಳೂ ಹೊರಬೇಕಿರುವ ಜವಾಬ್ದಾರಿ ಇದು. ಇದಾಗದೇ ಹೋದರೆ, ಯಾವ ಅಗತ್ಯವನ್ನೂ ಪೂರೈಸದೆ ಕೇವಲ ಡಿಜಿಸಿಎ ಮತ್ತು ರಾಜಕೀಯ ಕೃಪಾಶೀರ್ವಾದದಿಂದಲೇ ಅಸ್ತಿತ್ವದಲ್ಲಿ ಇದ್ದಿರಬಹುದಾದ ಮತ್ತಾವುದಾದರೂ ವಿಮಾನಯಾನ ಸಂಸ್ಥೆಯೂ ತನ್ನ ರೆಕ್ಕೆಗಳನ್ನು ಕಳೆದುಕೊಳ್ಳುವ ಮತ್ತೊಂದು ದಿನ ಕೂಡ ಬಂದೇ ಬರುತ್ತದೆ.







