ಸೋನಿಯಾ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಶೋಭಾ ಕರಂದ್ಲಾಜೆ

ಬೆಂಗಳೂರು, ಮೇ 8: ಭಾರತದ ಸಾರ್ವಭೌಮತ್ವದ ವಿರುದ್ಧ ಮಾತನಾಡಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಸೋಮವಾರ ನಗರದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಮೊನ್ನೆ ಸೋನಿಯಾಗಾಂಧಿಯವರು ಕರ್ನಾಟಕ ಸಾರ್ವಭೌಮತ್ವದ ವಿರುದ್ಧ ಮಾತನ್ನು ಆಡಿದ್ದಾರೆ ಎಂದು ದೂರಿದರು.
ದೇಶದ ಏಕತೆ, ಅಖಂಡತೆ, ಭದ್ರತೆ, ಸಾರ್ವಭೌಮತ್ವದ ಮಾತನ್ನು ಬಿಜೆಪಿ ಹೇಳುತ್ತದೆ. ಯಾವ ಕಾಶ್ಮೀರ, ಜೆಎನ್‍ಯು ನಲ್ಲಿ ತುಕ್ಡೆ, ತುಕ್ಡೆ ಗ್ಯಾಂಗ್ ಭಾರತದ, ದೇಶದ ವಿಭಜನೆ ಮಾಡುವ ಮಾತು ಹೇಳಿತ್ತೊ ಅದೇ ಮಾತನ್ನು ಕರ್ನಾಟಕದ ನೆಲದಲ್ಲಿ ಸೋನಿಯಾಗಾಂಧಿ ಆಡಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆಕ್ಷೇಪಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿ ಭಾರತದಿಂದ ಕಾಶ್ಮೀರವನ್ನು ದೂರ ಮಾಡಿ ಸಂವಿಧಾನದ 370ನೆ ವಿಧಿಯನ್ನು ಹೇರಲಾಯಿತು. ಅದಕ್ಕೆ ಪ್ರತ್ಯೇಕ ಸಂವಿಧಾನ, ಧ್ವಜ ನೀಡಲಾಯಿತು. ಬಿಜೆಪಿ ಸರಕಾರ 370ನೆ ವಿಧಿ ರದ್ದು ಪಡಿಸಿದ ನಂತರ ಅಲ್ಲಿ ಶಾಂತಿ ನೆಲೆಸಿದೆ. ಕರ್ನಾಟಕವನ್ನೂ ಕಾಶ್ಮೀರದಂತೆ ಮಾಡುವ ರೀತಿಯಲ್ಲಿ ಸೋನಿಯಾ ಮಾತನಾಡಿದ್ದಾರೆ. ಭಾರತದ ಸಾರ್ವಭೌಮತ್ವ ವಿರುದ್ಧ ಮಾತನಾಡಿದ್ದಾರೆ ಎಂದು ಅವರು ಟೀಕಿಸಿದರು.