ಸಿದ್ದರಾಮಯ್ಯ, ಡಿಕೆಶಿ ಸೋಲು ಖಚಿತ: ನಳಿನ್ ಕುಮಾರ್ ಕಟೀಲ್

ಮಂಗಳೂರು: ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ಅಂತಹ ಕಾಂಗ್ರೆಸ್ಸನ್ನು ರಾಜ್ಯದ ಜನತೆ ತಿರಸ್ಕರಿಸುತ್ತಾರೆ. ವರಣಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲು ಖಚಿತ. ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಸೋಲುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕಳೆದ ಬಾರಿ ಜಿ. ಪರಮೇಶ್ವರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ಗುಂಪುಗಳೇ ಈ ಬಾರಿಯೂ ಕಾರ್ಯ ಪ್ರವೃತ್ತವಾಗಿವೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಬಜರಂಗ ದಳ ನಿಷೇಧದ ದ್ವೇಷದ ರಾಜಕಾರಣ, ಸುಳ್ಳು ಭರವಸೆ, ಗ್ಯಾರಂಟಿ ಕಾರ್ಡ್‌ಗಳು- ಇವೆಲ್ಲ ಕಾಂಗ್ರೆಸ್ ಭವಿಷ್ಯ ಏನು ಎಂಬುದನ್ನು ಈಗಾಗಲೇ ಜನತೆ ತೋರಿಸಿಕೊಟ್ಟಿದ್ದಾರೆ' ಎಂದು ಹೇಳಿದರು.
ಸೌಭಾಗ್ಯ ಯೋಜನೆಯಡಿ ಮನೆ ಮನೆಗಳಿಗೆ ವಿದ್ಯುತ್ ಸಂಪರ್ಕ, ಜಲಜೀವನ್ ಮಿಷನ್ ಅಡಿಯಲ್ಲಿ 39 ಲಕ್ಷ ಮನೆಗಳಿಗೆ ನಳ್ಳಿ ನೀರು, ಉಜ್ವಲ ಯೋಜನೆಯಡಿ 37 ಲಕ್ಷ ಅಡುಗೆ ಅನಿಲ ಸಂಪರ್ಕಗಳು, ರಾಜ್ಯದಲ್ಲಿ 11 ವಿಮಾನ ನಿಲ್ದಾಣಗಳ ನಿರ್ಮಾಣ ಇವೆಲ್ಲ ಪಕ್ಷದ ಆಡಳಿತದಲ್ಲಿ ಅಭಿವೃದ್ಧಿಯ ಮಹಾಪರ್ವವೇ ನಡೆದಿದೆ ಎಂಬುದಕ್ಕೆ ಸಾಕ್ಷಿ. ಒಟ್ಟಾರೆಯಾಗಿ ಬಿಜೆಪಿ ಬಹುಮತದ ಸರಕಾರ ರಚಿಸುವುದು ಖಚಿತ ಎಂದು ಕಟೀಲ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಜಿಲ್ಲಾ ವಕ್ತಾರರಾದ ಜಗದೀಶ್ ಶೇಣವ, ಹಿರಿಯರಾದ ಮಾಜಿ ಶಾಸಕ ಮೋನಪ್ಪ ಭಂಡಾರಿ, ಮೂಡಾ ಅಧ್ಯಕ್ಷ, ವಕ್ತಾರ ರವಿಶಂಕರ ಮಿಜಾರ್, ಸುಧೀರ್ ಉಪಸ್ಥಿತರಿದ್ದರು.








