ಗುಜರಾತ್: ಹಾಡ ಹಗಲೇ ಬಿಜೆಪಿ ಪದಾಧಿಕಾರಿಯೊಬ್ಬರ ಗುಂಡಿಕ್ಕಿ ಹತ್ಯೆ

ವಲ್ಸಾದ್: ಗುಜರಾತ್‌ನ ವಲ್ಸಾದ್ ಜಿಲ್ಲೆಯ ವಾಪಿ ಪಟ್ಟಣದ ದೇವಸ್ಥಾನದಿಂದ ತನ್ನ ಪತ್ನಿ ಆಗಮನಕ್ಕಾಗಿ ಕಾರಿನಲ್ಲಿ ಕಾಯುತ್ತಿದ್ದ ಸ್ಥಳೀಯ ಬಿಜೆಪಿ ಪದಾಧಿಕಾರಿಯೊಬ್ಬರನ್ನು ಸೋಮವಾರ ಬೆಳಗ್ಗೆ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕೊಚರ್ವ ಗ್ರಾಮದ ಶೈಲೇಶ್ ಪಟೇಲ್ ಅವರ ಎಸ್‌ಯುವಿ ಬಳಿ ಬಂದು ಅವರ ಮೇಲೆ ಮೂರು-ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಡುಂಗರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶೈಲೇಶ್ ಪಟೇಲ್ ಅವರು ಬಿಜೆಪಿಯ ವಾಪಿ ತಾಲೂಕು ಘಟಕದ ಉಪಾಧ್ಯಕ್ಷರಾಗಿದ್ದರು ಎಂದು ಹೇಳಿರುವ ಅದರ ಅಧ್ಯಕ್ಷ ಸುರೇಶ್ ಪಟೇಲ್ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಶೈಲೇಶ್ ಅವರು ತನ್ನ ಪತ್ನಿಯೊಂದಿಗೆ ಪ್ರಾರ್ಥನೆ ಸಲ್ಲಿಸಲು ದೇವಸ್ಥಾನಕ್ಕೆ ಹೋಗಿದ್ದರು ಎಂದು ಸುರೇಶ್ ಪಟೇಲ್ ಹೇಳಿದ್ದಾರೆ. ಪ್ರಾರ್ಥನೆ ಮುಗಿಸಿ ಹೊರಬಂದು ತನ್ನ SUVಯಲ್ಲಿ ಹೆಂಡತಿಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ.
ನಾಲ್ವರು ದುಷ್ಕರ್ಮಿಗಳು ಎರಡು ಬೈಕ್‌ಗಳಲ್ಲಿ ಸ್ಥಳಕ್ಕೆ ಬಂದಿದ್ದರು ಎಂದು ಅವರು ಹೇಳಿದ್ದಾರೆ.
ಬೆಳಗ್ಗೆ 7.30ರ ಸುಮಾರಿಗೆ ಪಟೇಲ್ ತನ್ನ ಪತ್ನಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬರುವುದನ್ನು ವಾಹನದಲ್ಲಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.







