ಹಿಂದಿನ ಯಾವ ಪ್ರಧಾನಿಯೂ ಮಾಡಿರದಷ್ಟು ರೋಡ್ ಶೋಗಳನ್ನು ಮೋದಿಯವರು ಮಾಡಿದ್ದಾರೆ: ನಳಿನ್ ಕುಮಾರ್ ಕಟೀಲ್

ಮಂಗಳೂರು, ಮೇ 8; 'ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಮತ್ತು ಬಿ.ಎಸ್.ಯಡಿಯೂರಪ್ಪ- ಬಸವರಾಜ ಬೊಮ್ಮಾಯಿ ನೇತೃತ್ವಗಳ ಸರಕಾರಗಳು ಅನುಷ್ಠಾನ ಮಾಡಿದ ಅಭಿವೃದ್ಧಿ ಯೋಜನೆಗಳು, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಮತ್ತು ನಿರ್ಮಾಣ ಮಾಡಿದ ಮೂಲಭೂತ ಸೌಕರ್ಯಗಳ ಬಗ್ಗೆ ರಾಜ್ಯದ ಜನತೆಗೆ ಸಂಪೂರ್ಣ ಮೆಚ್ಚುಗೆಯಿದ್ದು, ಬಿಜೆಪಿ ಪೂರ್ಣ ಬಹುಮತದ ಸರಕಾರ ಈ ಬಾರಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತದೆ' ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯವರೆಗೂ ಹಳೆ ಮೈಸೂರು ಭಾಗ ಜೆಡಿಎಸ್ ಭದ್ರಕೋಟೆ ಆಗಿತ್ತು. ಆದರೆ ಈ ಬಾರಿ ಪ್ರಧಾನಿ ಮೋದಿ, 'ಕೇಂದ್ರ ಸಚಿವ ಅಮಿತ್ ಶಾ ಅವರ ಪ್ರವಾಸದ ನಂತರ ಆ ಭಾಗದಲ್ಲೂ ನಿರೀಕ್ಷೆಗೆ ಮೀರಿ ಜನಬೆಂಬಲ ಬಿಜೆಪಿಗೆ ಸಿಗುತ್ತಿದೆ. ಕರ್ನಾಟಕದ ಉದ್ದಗಲಕ್ಕೂ ಜನರ ಸಕಾರಾತ್ಮಕ ಬೆಂಬಲ ಸ್ಪಷ್ಟವಾಗಿ ಕಾಣುತ್ತಿದೆ. ಹೀಗಾಗಿ ಪೂರ್ಣ ಬಹುಮತದ ಸರಕಾರ ಬರುತ್ತದೆ. ಹಿಂದಿನ ಯಾವ ಪ್ರಧಾನಿಯೂ ಮಾಡಿರದಷ್ಟು ರೋಡ್ ಶೋಗಳನ್ನು, ಸಾರ್ವಜನಿಕ ಸಭೆಗಳನ್ನು ಪ್ರಧಾನಿ ಮೋದಿಯವರು ಮಾಡಿದ್ದಾರೆ. ಫಲಾನುಭವಿಗಳ ಜತೆ ಸಂವಾದ ಮಾಡಿದಾಗ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆತಿದೆ' ಎಂದು ತಿಳಿಸಿದರು.
'ಕಳೆದ ಒಂದೂವರೆ ತಿಂಗಳಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ದರ್ಶನ ಮಾಡಿದ್ದೇನೆ. ಒಂದು ವರ್ಷದಿಂದ ಬಿಜೆಪಿಯ ಚುನಾವಣೆ ತಯಾರಿ ನಡೆದಿತ್ತು. ಪೇಜ್ ಪ್ರಮುಖರ ಸಮಾವೇಶದಿಂದ ತೊಡಗಿ, ಸಂಕಲ್ಪ ಯಾತ್ರೆ, ಬೂತ್ ವಿಜಯ ಯಾತ್ರೆ, ವಿಜಯ ಸಂಕಲ್ಪ ಯಾತ್ರೆ ಮಡಿದ್ದೇವೆ. ಪ್ರಧಾನಿ ಮೋದಿ ಅವರು ಚುನಾವಣೆ ಘೋಷಣೆಗೆ ಮೊದಲು16 ಬಾರಿ, ಚುನಾವಣೆ ಘೋಷಣೆ ಆದ ನಂತರ 20 ಬಾರಿ ರಾಜ್ಯ ಪ್ರವಾಸ ಮಾಡಿದ್ದಾರೆ. ಇವೆಲ್ಲದರ ಪರಿಣಾಮವಾಗಿ ರಾಜ್ಯದಲ್ಲಿ ಬಿಜೆಪಿಯ ಬಹುಮತದ ಸರಕಾರ ನಿರ್ಮಾಣ ಆಗುತ್ತದೆ' ಎಂದು ನಳಿನ್ ಭರವಸೆ ವ್ಯಕ್ತಪಡಿಸಿದರು.
ಡಬಲ್ ಎಂಜಿನ್ ಸರಕಾರದ ಸಾಧನೆಗಳು ಇವತ್ತು ಜನಸಾಮಾನ್ಯರಿಗೆ ತಲುಪಿವೆ. ಪ್ರಧಾನಿ ಮೋದಿ ಅವರ ಆಡಳಿತದ ಶೈಲಿ, ಅಭಿವೃದ್ಧಿ ಕಾರ್ಯಗಳು, ನಮ್ಮ ಮುಖ್ಯಮಂತ್ರಿಗಳ ಅಭಿವೃದ್ಧಿ ಕಾರ್ಯ, ಮೂಲಸೌಕರ್ಯ ನಿರ್ಮಾಣದ ಲಾಭಗಳು ಜನಮಾನಸಕ್ಕೆ ತಲುಪಿವೆ ಎಂದು ಅವರು ನುಡಿದರು.
ಪ್ರತಿ ಮತಗಟ್ಟೆಯಲ್ಲಿ 15-20 ಫಲಾನುಭವಿಗಳಿದ್ದಾರೆ. ಅವರೆಲ್ಲರೂ ಮೋದಿ ಸರಕಾರ, ಬೊಮ್ಮಾಯಿ ಸರಕಾರದ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಜಿಲ್ಲಾ ವಕ್ತಾರರಾದ ಜಗದೀಶ್ ಶೇಣವ, ಹಿರಿಯರಾದ ಮಾಜಿ ಶಾಸಕ ಮೋನಪ್ಪ ಭಂಡಾರಿ, ಮೂಡಾ ಅಧ್ಯಕ್ಷ, ವಕ್ತಾರ ರವಿಶಂಕರ ಮಿಜಾರ್, ಸುಧೀರ್ ಉಪಸ್ಥಿತರಿದ್ದರು.