ಎಸೆಸೆಲ್ಸಿ ಟಾಪರ್ ಭೂಮಿಕಾ ಪೈಗೆ ಗಗನಯಾತ್ರಿ ಆಗುವ ಆಸೆ
ಕಟಪಾಡಿ ಮೂಲದ ಬೆಂಗಳೂರಿನ ವಿದ್ಯಾರ್ಥಿನಿಗೆ 625 ಅಂಕ

ಉಡುಪಿ, ಮೇ 8: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬೆಂಗಳೂರು ನ್ಯೂ ಮೆಕಾಲ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ, ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಮೂಲದ ಭೂಮಿಕಾ ಪೈ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಮೂಡಿ ಬಂದಿದ್ದಾರೆ.
ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ರಮೇಶ್ ಪೈ ಹಾಗೂ ಗೃಹಿಣಿ ರಮ್ಯ ಪೈ ಗೃಹಿಣಿ ದಂಪತಿ ಪುತ್ರಿಯಾಗಿರುವ ಭೂಮಿಕಾ ಪೈ, ರಜೆಯ ಹಿನ್ನೆಲೆ ಯಲ್ಲಿ ಕಟಪಾಡಿಯಲ್ಲಿರುವ ತಾಯಿಯ ಮನೆಗೆ ಬಂದಿದ್ದಾರೆ. ಈ ಸಾಧನೆಗಾಗಿ ಕಟಪಾಡಿಯ ಮನೆಯಲ್ಲಿ ಕುಟುಂಬದವರೊಂದಿಗೆ ಸೇರಿ ಭೂಮಿಕಾ ಸಿಹಿ ಹಂಚಿ ಸಂಭ್ರಮ ಆಚರಿಸಿದರು. ಇವರ ಅಕ್ಕ ಚೈತ್ರಾ ಆರ್.ಪೈ ಇತ್ತೀಚೆಗೆ ದ್ವಿತೀಯ ಪಿಯುಸಿ ಮುಗಿಸಿದ್ದಾರೆ.
ಬಳಿಕ ಮಾತನಾಡಿದ ಭೂಮಿಕಾ ಪೈ, ಎಲ್‌ಕೆಜಿಯಿಂದ ಎಸೆಸೆಲ್ಸಿಯವರೆಗೆ ಇದೇ ಶಾಲೆಯಲ್ಲಿ ಓದುತ್ತಿದ್ದೇನೆ. ಇಲ್ಲಿನ ಶಿಕ್ಷಕರು ನನಗೆ ತುಂಬಾ ಚೆನ್ನಾಗಿ ಪಾಠ ಹೇಳಿಕೊಡುತ್ತಿದ್ದರು. ತಂದೆತಾಯಿ ಮತ್ತು ಅಕ್ಕ ಅವರ ಪ್ರೋತ್ಸಾಹ ಕೂಡ ನನಗೆ ಈ ಸಾಧನೆ ಮಾಡಲು ಸಾಧ್ಯವಾಯಿತು. ಶೇ.95ಕ್ಕಿಂತ ಜಾಸ್ತಿ ಅಂಕ ಸಿಗ ಬಹುದು ಎಂದು ನಿರೀಕ್ಷೆ ಮಾಡಿದ್ದೆ. ಆದರೆ ಶೇ.100 ಅಂಕ ಸಿಗುತ್ತದೆ ಎಂದು ಯಾವತ್ತೂ ಎನಿಸಿಲ್ಲ. ಇದೀಗ ತುಂಬಾ ಖುಷಿ ಆಗುತ್ತಿದೆ ಎಂದರು.
ನಾನು ಮನೆಯಲ್ಲಿ ಬೆಳಗ್ಗೆ ಓದುತ್ತಿರಲಿಲ್ಲ. ಬೆಳಗ್ಗೆ ಆರು ಗಂಟೆಗೆ ಎದ್ದು ಶಾಲೆಗೆ ಹೋಗುತ್ತಿದ್ದೆ. ಶಾಲೆ ಬಿಟ್ಟು ಬಂದು ಅಂದಿನ ಪಾಠ ಅಂದೇ ಓದುತ್ತಿದ್ದೆ. ಜಾಸ್ತಿ ಏನಾದರೂ ಓದಲು ಇದ್ದರೆ ರಾತ್ರಿ 12ಗಂಟೆವರೆಗೂ ಓದುತ್ತಿದೆ. ಟ್ಯೂಷನ್ ಹೋಗದೆ ಮನೆಯಲ್ಲೇ ಓದುತ್ತಿದ್ದೆ. ಮುಂದೆ ಪಿಯುಸಿಯಲ್ಲಿ ವಿಜ್ಞಾನ ಪಡೆದು ಗಗನಯಾತ್ರಿ ಆಗಬೇಕೆಂಬುದು ನನ್ನ ಗುರಿಯಾಗಿದೆ ಎಂದು ಅವರು ತಿಳಿಸಿದರು.
ಸದ್ಯ ರಜೆಯ ಹಿನ್ನೆಲೆಯಲ್ಲಿ ಮತ್ತು ಕುಟುಂಬದ ಕಾರ್ಯಕ್ರಮದ ಪ್ರಯುಕ್ತ ಕಟಪಾಡಿಯಲ್ಲಿರುವ ತಾಯಿ ಮನೆಗೆ ಬಂದಿದ್ದೇನೆ. ಇಲ್ಲೇ ನಾವೆಲ್ಲ ಸಂಭ್ರಮ ಆಚರಿಸಿದ್ದೇವೆ. ಇಲ್ಲಿ ತುಂಬಾ ಕಾರ್ಯಕ್ರಮ ಇದೆ. ಅದೆಲ್ಲ ಮುಗಿಸಿ ಮುಂದಿನ ತಿಂಗಳು ಬೆಂಗಳೂರಿಗೆ ಹೋಗುತ್ತೇನೆ ಎಂದು ಅವರು ಹೇಳಿದರು.







