14 ಆ್ಯಪ್ಗಳ ನಿಷೇಧ ಕುರಿತು ಕೇಂದ್ರದ ನಿರ್ಧಾರ ಟೀಕಿಸಿದ 'ಫ್ರೀ ಸಾಫ್ಟ್ವೇರ್ ಕಮ್ಯುನಿಟಿ ಆಫ್ ಇಂಡಿಯಾ'
ಹೊಸದಿಲ್ಲಿ: ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತವರ ಬೆಂಬಲಿಗರು ಬಳಸುತ್ತಿದ್ದಾರೆ ಎಂದು ಹೇಳಿಕೊಂಡು 14 ಮೊಬೈಲ್ ಅಪ್ಲಿಕೇಶನ್ಗಳನ್ನು ನಿರ್ಬಂಧಿಸಿದ ಕೇಂದ್ರ ಸರ್ಕಾರದ ಇತ್ತೀಚಿನ ಕ್ರಮವನ್ನು ಫ್ರೀ ಸಾಫ್ಟ್ವೇರ್ ಕಮ್ಯುನಿಟಿ ಆಫ್ ಇಂಡಿಯಾ ಟೀಕಿಸಿದೆ.
ಸರ್ಕಾರದ ಈ ನಿರ್ಧಾರವು ಈ ಕುರಿತಂತೆ ಅದರ ಜ್ಞಾನದ ಕೊರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಂಸ್ಥೆ ಹೇಳಿದೆ.
ನಿಷೇಧಿಸಲಾಗಿದೆ ಎಂದು ಹೇಳಲಾದ ಆಪ್ಗಳಲ್ಲಿ Wickrme, Mediafire, Briar, BChat, Nandbox, Conion, IMO, Element, Second Line, Zangi, Threema, Crypviser, Enigma ಮತ್ತು Safeswiss ಸೇರಿವೆ.
ಈ ನಿಷೇಧವನ್ನು ಜಾರಿಗೊಳಿಸಿದ ರೀತಿಯಲ್ಲಿ ಸ್ಪಷ್ಟತೆಯ ಕೊರತೆಯಿದೆ ಎಂದು ಫ್ರೀ ಸಾಫ್ಟ್ವೇರ್ ಕಮ್ಯುನಿಟಿ ಆಫ್ ಇಂಡಿಯಾ ಹೇಳಿದೆ. ಈ ಸಾಫ್ಟ್ವೇರ್ಗಳು ಮತ್ತು ಫೆಡರೇಟೆಡ್ ಆ್ಯಪ್ಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಕುರಿತೂ ಸರಕಾರಕ್ಕೆ ಸರಿಯಾದ ತಿಳುವಳಿಕೆಯಿಲ್ಲ ಅನಿಸುತ್ತದೆ. ವಿಪತ್ತಿನ ಸಂದರ್ಭ ಸಂವಹನಕ್ಕೆ ಈ ಅಪ್ಲಿಕೇಶನ್ಗಳು ಮಹತ್ವದ್ದಾಗಿವೆ ಮತ್ತು ಕೆಲಸದ ಸ್ಥಳಗಳಲ್ಲೂ ಸಂವಹನ ಮಾಧ್ಯಮಗಳಾಗಿ ಬಳಸಲಾಗುತ್ತವೆ ಎಂದು ಸಂಸ್ಥೆ ಹೇಳಿದೆ.
ಈ ನಿಷೇಧದ ಉದ್ದೇಶ ಈಡೇರಿಕೆಯಾಗದು, ಏಕೆಂದರೆ ಉಗ್ರವಾದಿ ಸಂಘಟನೆಗಳು ಬಳಸಬಹುದಾದ ಹಲವಾರು ಅನಾಮಧೇಯ ಪರ್ಯಾಯ ಆ್ಯಪ್ಗಳಿವೆ ಎಂದು ಸಂಘಟನೆ ಹೇಳಿದೆ.
“ಫೆಡರೇಟೆಡ್, ಎನ್ಕ್ರಿಪ್ಟ್ ಮಾಡಲಾದ Element ಮತ್ತು Briar ನಂತಹ ಉಚಿತ ಸಾಫ್ಟ್ವೇರ್ ಆಪ್ಗಳನ್ನು ಉತ್ತೇಜಿಸಬೇಕು ಏಕೆಂದರೆ ಅವು ಭಾರತದ ನಾಗರಿಕರಿಗೆ ಖಾಸಗಿ, ಸುರಕ್ಷಿತ ಸಂವಹನವನ್ನು ಒದಗಿಸುತ್ತದೆ ಎಂದು ಸಂಘಟನೆ ಹೇಳಿದೆ.