ದಲಿತ ದೌರ್ಜನ್ಯ ಪ್ರಕರಣ: ಆರೋಪಿಯನ್ನು ಬಂಧಿಸದಿದ್ದಲ್ಲಿ ಠಾಣೆಯ ಮುಂದೆ ಪ್ರತಿಭಟನೆ- ದಲಿತ್ ಸೇವಾ ಸಮಿತಿ ಎಚ್ಚರಿಕೆ

ಪುತ್ತೂರು: ನೆಕ್ಕಿಲಾಡಿ ಗ್ರಾಮದ ಅಲಿಮಾರ್ ನಿವಾಸಿ ಲೀಲಾ ಆದಿದ್ರಾವಿಡ ಅವರ ಕುಟುಂಬಕ್ಕೆ ವಂಚನೆ ಆಗಿರುವ ಹಾಗೂ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ನಡೆಸಿರುವವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಾಗಿ 10 ದಿನ ಕಳೆದರೂ ಆರೋಪಿ ಗಳನ್ನು ಬಂಧಿಸಿಲ್ಲ. ತಕ್ಷಣವೇ ಆರೋಪಿಯನ್ನು ಬಂಧಿಸದಿದ್ದಲ್ಲಿ ಉಪ್ಪಿನಂಗಡಿ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ. ಜಿಲ್ಲಾ ದಲಿತ ಸೇವಾ ಸಮಿತಿ ಎಚ್ಚರಿಸಿದೆ.
ಸೋಮವಾರ ಪುತ್ತೂರು ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಅವರು ಬಡ ಕುಟುಂಬದ ಪರಿಶಿಷ್ಟ ಜಾತಿಗೆ ಸೇರಿದ ಲೀಲಾ ಅವರ ಮುಗ್ಧತೆಯನ್ನು ಬಳಸಿಕೊಂಡು ಅದೇ ಗ್ರಾಮದ ಸತ್ಯವತಿ ಎಂಬವರು ಲೀಲಾ ಅವರ ಹೆಸರಿನಲ್ಲಿ ಬ್ಯಾಂಕ್ ನಿಂದ ಸಾಲ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿದರು.
ಸತ್ಯವತಿ ಅವರು ಲೀಲಾ ಅವರ ಹೆಸರಿನಲ್ಲಿ 30 ಸಾವಿರ ರೂ. ಬ್ಯಾಂಕ್ ಸಾಲ ಪಡೆದು ವಂಚಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಮತ್ತು ಉಪ್ಪಿನಂಗಡಿ ಠಾಣೆಗೆ ದೂರು ನೀಡಲಾಗಿತ್ತು. ಆ ಸಂದರ್ಭದಲ್ಲಿ ಸಾಲ ಮರುಪಾವ ತಿಸುದಾಗಿ ಸತ್ಯವತಿ ಅವರು ಒಪ್ಪಿಕೊಂಡರೂ ಬಳಿಕ ವಿರುದ್ಧ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ಎಸಗಿದ್ದಾರೆ. ಈಗ ಸಾಲಕ್ಕೆ ಬಡ್ಡಿ ಸೇರಿ 52 ಸಾವಿರ ಪಾವತಿಸಬೇಕಾಗಿದೆ ಎಂದರು.
ಪಂಚಾಯತ್ ಸದಸ್ಯರಾಗಿದ್ದ ಸತ್ಯವತಿ ಅವರು ಲೀಲಾ ಅವರ ಅತ್ತೆಯ ಹೆಸರಿನಲ್ಲಿ ಗಂಗಾ ಕಲ್ಯಾಣ ಯೋಜನೆಯ ಮೂಲಕ ಕೊಳವೆ ಬಾವಿ ಮಂಜೂರು ಮಾಡಿಸಿಕೊಟ್ಟು ಲೀಲಾ ಅವರ ಕೈಷಿಗೆ ಉಪಯೋಗ ಮಾಡಬೇಕಿದ್ದ ನೀರನ್ನು ತಾವೇ ಉಪಯೋಗ ಮಾಡಿಕೊಂಡು ಬೆದರಿಕೆ ಹಾಕಿದ್ದಾರೆ. ಈ ಎಲ್ಲಾ ವಿಚಾರಗಳಿಂದ ಲೀಲಾ ಅವರ ಕುಟುಂಬ ನೊಂದಿದ್ದು, ಸತ್ಯವತಿ ದಂಪತಿ ಮೇಲೆ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದರೂ ಬಂಧನಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಲಿಮಾರ್ ನಿವಾಸಿಗಳಾದ ಲೀಲಾ, ಅಣ್ಣಿ ಆದಿದ್ರಾವಿಡ, ಅರುಣ್ ಬಿ. , ಗಣೇಶ್ ಸೀಗೆಬಲ್ಲೆ ಉಪಸ್ಥಿತರಿದ್ದರು.