ಚುನಾವಣೆ ಕೆಲಸದ ನೌಕರರಿಗೆ ಕೂಲಿ ನೀಡುವಂತೆ ಆಗ್ರಹಿಸಿ ಮನವಿ

ಉಡುಪಿ, ಮೇ 8: ಚುನಾವಣೆ ಸಂಬಂಧ ಕರ್ತವ್ಯ ನಿರತ ಅಧಿಕಾರಿಗಳಿಗೆ ಬಿಸಿಯೂಟ ಮಾಡಿ ಕೊಡುವ ಅಕ್ಷರ ದಾಸೋಹ ನೌಕರರಿಗೆ ಕೂಲಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಎರಡು ತಿಂಗಳಿಂದ ಕೆಲಸವಿಲ್ಲದಿರುವುದರಿಂದ ಅಕ್ಷರದಾಸೋಹ ನೌಕರರಿಗೆ ಸಂಬಳವಿಲ್ಲದ ಕಾರಣ ತಮ್ಮ ಕುಟುಂಬಗಳು ಸಂಕಷ್ಟದಲ್ಲಿದೆ ಈಗ ಚುನಾವಣೆ ಸಂಬಂಧ ಕೂಲಿ ಇಲ್ಲದೇ ಎರಡೂ ದಿನ ಕೆಲಸ ಮಾಡಲು ಒತ್ತಾಯಿಸಲಾಗುತ್ತಿದೆ. ಎರಡೂ ದಿನ ಚುನಾವಣೆಗೆ ಕೆಲಸ ಮಾಡುವ ಎಲ್ಲರೂ ಸಂಬಳ ಪಡೆಯುತ್ತಿದ್ದು ಬಡ ಅಕ್ಷರ ದಾಸೋಹ ನೌಕರರು ಮಾತ್ರ ಕೂಲಿ ಇಲ್ಲದೇ ಕೆಲಸ ಮಾಡಬೇಕೆಂದು ಹೇಳುತ್ತಿರುವುದು ಸರಿಯಲ್ಲ. ಮೊದಲ ದಿನ ಆಹಾರ ಬೇಯಿಸುವ ಅನಂತರ ಸ್ವಚ್ಛ ಮಾಡುವ ಕೆಲಸಕ್ಕೆ 500ರೂ. ಎರಡನೇ ದಿನ 750ರೂ. ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂಘದ ನಿಯೋಗದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷೆ ಸಿಂಗಾರಿ ನಾವುಂದ, ಪ್ರಧಾನ ಕಾರ್ಯ ದರ್ಶಿ ಸುನಂದ, ನಾಗರತ್ನ, ಹೇಮಾ, ಮಾಲಿನಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಉಪಸ್ಥಿತರಿದ್ದರು.