ಉಡುಪಿ ಜಿಲ್ಲೆಯಲ್ಲಿ 19 ಅರೆ ಸೇನಾ ಪಡೆಗಳ ನಿಯೋಜನೆ: ಅಕ್ಷಯ್ ಹಾಕೆ ಮಚ್ಚೀಂದ್ರ

ಉಡುಪಿ, ಮೇ 8: ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕೆ ಬೇಕಾದ ಎಲ್ಲಾ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ 19 ಕಂಪೆನಿ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ವಿವರಿಸಿದ್ದಾರೆ.
ಮಹಾರಾಷ್ಟ್ರ, ತಮಿಳುನಾಡುಗಳ ಮೀಸಲು ಪೊಲೀಸ್ ಪಡೆ, ಸಿಆರ್‌ಪಿಎಫ್ ಸೇರಿದಂತೆ 19 ಕಂಪೆನಿಗಳು ಜಿಲ್ಲೆಯಲ್ಲಿ ಕರ್ತವ್ಯ ನಿರತವಾಗಿವೆ. ಇವು ಈಗಾಗಲೇ 90 ಕಡೆಗಳಲ್ಲಿ ಪಥ ಸಂಚಲನ ನಡೆಸಿ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ 741 ಪ್ರಕರಣಗಳ್ಲಿ 850ಕ್ಕೂ ಹೆಚ್ಚು ಜನರಿಂದ ಬಾಂಡಿಂಗ್ ಬರೆಸಿಕೊಳ್ಳಲಾಗಿದೆ. ಇದರಲ್ಲಿ ತಪ್ಪು ಮಾಡಿದ 7 ಮಂದಿಯಿಂದ 7 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಜಿಲ್ಲಾಧಿಕಾರಿ ಮಾರ್ಗದರ್ಶನ ಹಾಗೂ ಎಸಿ ಅವರ ಮೂಲಕ ಈಗಾಗಲೇ 13 ಮಂದಿಯನ್ನು ಗಡಿಪಾರು ಮಾಡಲಾಗಿದೆ.
ಇಬ್ಬರು ಆರೋಪಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಜಿಲ್ಲೆಯಲ್ಲಿರುವ 3300ಪರವಾನಿಗೆಯ ಶಸ್ತ್ರಾಸ್ತ್ರಗಳಲ್ಲಿ ಅಗತ್ಯವಿರುವ 27ನ್ನು ಬಿಟ್ಟು ಉಳಿದೆಲ್ಲಾ ಶಸ್ತ್ರಾಸ್ತ್ರಗಳನ್ನು ಠಾಣೆಗಳಲ್ಲಿ ಠೇವಣಿ ಇರಿಸಿ ಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ನಡೆದ ಎಲ್ಲಾ ಪ್ರಚಾರ ಕಾರ್ಯಗಳಿಗೆ ಯಾವುದೇ ದೂರುಗಳು ಬಾರದಂತೆ ಭದ್ರತೆ ಒದಗಿಸಲಾಗಿದೆ.
ಮೇ 10ರ ಚುನಾವಣೆಗೆ 2500 ಮಂದಿ ಪೊಲೀಸ್ ಅಧಿಕಾರಿಗಳು, ಹೋಮ್‌ಗಾರ್ಡ್‌ಗಳು, ಪೊಲೀಸ್ ಸಿಬ್ಬಂದಿ ಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಒಟ್ಟು 73 ವಿಶೇಷ ಸೆಕ್ಟರ್‌ಗಳ ಮೂಲಕ ಎಲ್ಲಾ ಮತಗಟ್ಟೆಗಳ ನಿಗಾ ವಹಿಸಲಾಗುವುದು ಎಂದು ಮಚ್ಚೀಂದ್ರ ತಿಳಿಸಿದರು.