ಎಲ್ಐಸಿಯನ್ನು ಖಾಸಗಿಯವರಿಗೆ ಒಪ್ಪಿಸಲು ಕೇಂದ್ರ ಸರಕಾರ ಸಿದ್ಧತೆಯಲ್ಲಿದೆ: ಭಾರತೀಯ ಎಲ್ಐಸಿ ಏಜಂಟ್ ಗಳ ಸಂಘ

ವಿಶಾಖಪಟ್ಟಣಂ, ಮೇ 8: ಆರ್ಥಿಕವಾಗಿ ಬಲಿಷ್ಠವಾಗಿರುವ ಭಾರತೀಯ ಜೀವ ವಿಮಾ ನಿಗಮ (LIC)ವನ್ನು ಖಾಸಗಿಯವರಿಗೆ ಒಪ್ಪಿಸಲು ಕೇಂದ್ರ ಸರಕಾರ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಭಾರತೀಯ ಎಲ್ಐಸಿ ಏಜಂಟ್ ಗಳ ಸಂಘ (LICAOI)ದ ಪ್ರಾದೇಶಿಕ ಪ್ರಧಾನ ಕಾರ್ಯದರ್ಶಿ ಪಿ.ಎಲ್. ನರಸಿಂಹ ರಾವ್ ಸೋಮವಾರ ಆರೋಪಿಸಿದ್ದಾರೆ.
ಈ ನಿಟ್ಟಿನಲ್ಲಿ ಈಗಾಗಲೇ ಎಲ್ಐಸಿಯ ಐಪಿಒ (ಶೇರು ಮಾರುಕಟ್ಟೆ ಪ್ರವೇಶ) ಹೊರತಂದಿರುವ ಸರಕಾರವು, ಮುಂದಿನ ಹಂತವಾಗಿ ಅದನ್ನು ಕಾರ್ಪೊರೇಟ್ ಕುಳಗಳಿಗೆ ಹಸ್ತಾಂತರಿಸಲಿದೆ ಎಂಬುದಾಗಿ ಅವರು ಭವಿಷ್ಯ ನುಡಿದರು.
ಆರನೇ ಅಖಿಲ ಭಾರತ ಭಾರತೀಯ ಎಲ್ಐಸಿ ಏಜಂಟ್ ಗಳ ಸಂಘದ ಸಮಾವೇಶದ ಬಗ್ಗೆ ಮಾಹಿತಿ ನೀಡಲು ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಆರೋಪಗಳನ್ನು ಮಾಡಿದರು. ಸಮಾವೇಶವು ದಾಬಗಾರ್ಡನ್ಸ್ ಅಲ್ಲೂರಿ ವಿಜ್ಞಾನ ಕೇಂದ್ರನಲ್ಲಿ ಮೇ 22 ಮತ್ತು 23ರಂದು ನಡೆಯಲಿದೆ.
ಎಲ್ಐಸಿಯನ್ನು ಖಾಸಗೀಕರಣಗೊಳಿಸುವ ಯೋಜನೆಯ ಭಾಗವಾಗಿಯೇ, ಐಆರ್ಡಿಎಐಯ ‘ಬಿಮಾ ನಿಗಮ್’ ಕರಡು ಸೇರಿದಂತೆ ಹಲವಾರು ನೀತಿಗಳನ್ನು ಕೇಂದ್ರ ಸರಕಾರ ತಂದಿದೆ ಎಂದು ಅವರು ಹೇಳಿದರು. ಎಲ್ಐಸಿಯ ಅಸ್ತಿತ್ವ ಮಾತ್ರವಲ್ಲ, ಎಲ್ಐಸಿ ಏಜಂಟ್ ಗಳ ಅಸ್ತಿತ್ವವೂ ಅಪಾಯದಲ್ಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಎಲ್ಐಸಿ, ಬ್ಯಾಂಕ್ ಗಳು ಮತ್ತು ಇತರ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಕೆಲವು ಕಾರ್ಪೊರೇಟ್ ಗುಂಪುಗಳಿಗೆ ವಹಿಸಿಕೊಡಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ಈ ನೀತಿಗಳು ಸಾಮಾನ್ಯ ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿವೆ ಎಂದರು.
ವಿಶಾಖಪಟ್ಟಣಂ ಉಕ್ಕು ಸ್ಥಾವರ (ವಿಎಸ್ಪಿ)ದ ಖಾಸಗೀಕರಣವನ್ನು ವಿರೋಧಿಸಿ ಅದರ ಕೆಲಸಗಾರರು 800ಕ್ಕೂ ಹೆಚ್ಚು ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಗೆ ನರಸಿಂಹ ರಾವ್ ಬೆಂಬಲ ವ್ಯಕ್ತಪಡಿಸಿದರು. ವಿಎಸ್ಪಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಎಲ್ಐಸಿಎಒಐ ಕೂಡ ಪಾಲ್ಗೊಳ್ಳಲಿದೆ ಎಂದು ಅವರು ಹೇಳಿದರು.
ಖಾಸಗೀಕರಣ ವಿರೋಧಿಸಿ ಬೃಹತ್ ಮೆರವಣಿಗೆ
ಖಾಸಗೀಕರಣವನ್ನು ವಿರೋಧಿಸಿ ಮೇ 22ರಂದು ನೂರಾರು ಎಲ್ಐಸಿ ಏಜಂಟರು, ಉದ್ಯೋಗಿಗಳು ಮತ್ತು ಪಾಲಿಸಿದಾರರು ಬೃಹತ್ ಮೆರವಣಿಗೆ ನಡೆಸಲಿದ್ದಾರೆ. ಕೇರಳದ ಮಾಜಿ ಹಣಕಾಸು ಸಚಿವ ಥಾಮಸ್ ಐಸಾಕ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮಾಜಿ ಸಂಸದ ಹಾಗೂ ಎಲ್ಐಸಿಎಒಐ ರಾಷ್ಟ್ರೀಯ ಅಧ್ಯಕ್ಷ ಬಸುದೇವ ಆಚಾರ್ಯ ಮತ್ತು ಮಾಜಿ ಸಂಸದ ಎ. ಸಂಪತ್ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.







