ದಲಿತ ವಿರೋಧಿ ಭ್ರಷ್ಟ ಸರಕಾರವನ್ನು ಸೋಲಿಸಿ: ದಲಿತ ಸಂಘಟನೆಗಳ ಐಕ್ಯ ಸಮಿತಿ ಕರೆ

ಉಡುಪಿ, ಮೇ 8: ದಲಿತ ವಿರೋಧಿ ಭ್ರಷ್ಟ ಸರಕಾರವನ್ನು ಸೋಲಿಸಿ ಜಾತ್ಯತೀತ ಪಕ್ಷವನ್ನು ಬೆಂಬಲಿಸುವಂತೆ ದಲಿತ ಸಂಘಟನೆಗಳ ಐಕ್ಯ ಸಮಿತಿಯು ಎಲ್ಲ ಜಾತ್ಯತೀತರು ಮತ್ತು ದಲಿತ ಸಮುದಾಯಕ್ಕೆ ಕರೆ ನೀಡಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಸುಂದರ್ ಮಾಸ್ತರ್, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಿ ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸಲು ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ಜನಸಾಮಾನ್ಯರ ಸಮಸ್ಯೆಗಳಾದ ಬೆಲೆ ಏರಿಕೆ, ನಿರುದ್ಯೋಗ ಕಡೆ ಗಮನ ಹರಿಸದೆ ಶೇ.40 ಕಮಿಷನ್ ಪಡೆಯುವ ಕೆಲಸಗಳನ್ನು ಮಾತ್ರ ಕೈಗೆತ್ತಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿಯ ಯುವಕರು ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸ್ವ ಉದ್ಯೋಗ ಮಾಡಲು ಟ್ಯಾಕ್ಸಿ ಇತ್ಯಾದಿ ಗಳಿಗೆ ಅರ್ಜಿ ಸಲ್ಲಿಸಿದ ಫಲಾನುಭವಿ ಗಳಲ್ಲಿ ಕ್ಷೇತ್ರವಾರು ಒಬ್ಬರನ್ನು ಮಾತ್ರ ಆಯ್ಕೆ ಮಾಡಿ ಉಳಿದವ ರನ್ನು ಆಯ್ಕೆ ಮಾಡಲು ಸಾಫ್ಟ್‌ವೇರ್ ಸಮಸ್ಯೆ ಎಂಬ ಕಾರಣ ನೀಡಿ ನಿರಾಕರಿಸುತ್ತಿರುವುದು ನಿಗಮವನ್ನು ಮುಚ್ಚಿಸುವ ಹುನ್ನಾರವಾಗಿದೆ ಎಂದು ಅವರು ದೂರಿದರು.
ಗೋಹತ್ಯೆ ನಿಷೇಧ ಭೂಸುಧಾರಣಾ ಕಾಯಿದೆ ಮತ್ತು ಮತಾಂತರ ನಿಷೇಧ ಕಾಯಿದೆಗೆ ತಿದ್ದುಪಡಿ ಮಾಡುವುದರ ಮೂಲಕ ಬಿಜೆಪಿ ಸರಕಾರ ಸಂವಿಧಾನ ವಿರೋಧ ನೀತಿಯನ್ನು ಅನುಸರಿಸಿದೆ. ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದರಿಂದ ವಿದ್ಯಾವಂತ ಶೋಷಿತ ಸಮುದಾಯದ ಯುವಕರು ನಿರುದ್ಯೋಗಿಗಳಾಗಿ ಉಳಿಯು ವಂತಾಗಿದೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕರಾದ ವಿಶ್ವನಾಥ್ ಬೆಳ್ಳಂಪಳ್ಳಿ, ಹರೀಶ್ ಮಲ್ಪೆ, ಶೇಖರ್ ಹೆಜಮಾಡಿ, ಆನಂದ ಬ್ರಹ್ಮಾವರ, ಭಗವಾನ್ ಮಲ್ಪೆ, ಕೃಷ್ಣ ಶ್ರೀಯಾನ್ ಉಪಸ್ಥಿತರಿದ್ದರು.