ಗೋಫಸ್ಟ್ ಗೆ ಡಿಜಿಸಿಎ ಶೋಕಾಸ್ ನೋಟಿಸ್: ವಿಮಾನದ ಟಿಕೆಟ್ ಬುಕ್ಕಿಂಗ್, ಮಾರಾಟ ಸ್ಥಗಿತಗೊಳಿಸಲು ಆದೇಶ

ಹೊಸದಿಲ್ಲಿ,ಮೇ 8: ಸಂಕಷ್ಟದಲ್ಲಿರುವ ಮಿತದರದ ವಿಮಾನಯಾನ ಸಂಸ್ಥೆ ‘ಗೋಫಸ್ಟ್’ ಗೆ ವೈಮಾನಿಕ ನಿಯಂತ್ರಣ ಸಂಸ್ಥೆ ಡಿಜಿಸಿಎ ಸೋಮವಾರ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ‘‘ವಿಮಾನಯಾನ ಕಾರ್ಯಾಚರಣೆಯನ್ನು ಸುರಕ್ಷಿತ, ಸಮರ್ಥ ಹಾಗೂ ವಿಶ್ವಸನೀಯ ರೀತಿಯಲ್ಲಿ ಮುಂದುವರಿಸಲು ವಿಫಲವಾಗಿದೆ’’ ಎಂದು ಹೇಳಿದೆ. ಮುಂದಿನ ಆದೇಶದವರೆಗೆ ವಿಮಾನದ ಟಿಕೆಟ್ ಗಳ ಬುಕ್ಕಿಂಗ್ ಹಾಗೂ ಮಾರಾಟವನ್ನು ತಕ್ಷಣವೇ ನಿಲ್ಲಿಸುವಂತೆ ಆದೇಶಿಸಿದೆ.
ಈ ನೋಟಿಸ್ ದೊರೆತ ಹದಿನೈದು ದಿನಗಳೊಳಗೆ ಈ ಬಗ್ಗೆ ಉತ್ತರ ನೀಡುವಂತೆ ಗೋಫಸ್ಟ್ ವಿಮಾನಯಾನ ಸಂಸ್ಥೆಗೆ ಡಿಜಿಸಿಎ ಆದೇಶ ನೀಡಿದೆ. ಈ ನಿರ್ಧಾರವನ್ನು ಆಧರಿಸಿ ಅದಕ್ಕೆ ವಿಮಾನ ನಿರ್ವಾಹಕರ ಪ್ರಮಾಣಪತ್ರ (AOC)ವನ್ನು ಮುಂದುವರಿಸುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದರು.
ವಾಯುಯಾನ ಸಂಸ್ಥೆಯು ಮೇ 15ರೊಳಗೆ ಟಿಕೆಟ್ ಗಳ ಮಾರಾಟವನ್ನು ಅಮಾನತಿನಲ್ಲಿರಿಸಿದೆ ಹಾಗೂ ಮೇ 12ರವರೆಗೆ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ.
ವಾಡಿ ಸಮೂಹದ ಏರ್ಲೈನ್ ಸಂಸ್ಥೆಯಾದ ಗೋಫಸ್ಟ್, ಈ ಮೊದಲು ‘ಗೋಏರ್’ ಎಂಬ ಹೆಸರು ಹೊಂದಿತ್ತು. ರಾಷ್ಟ್ರೀಯ ಕಂಪೆನಿ ಕಾನೂನು ಟ್ರಿಬ್ಯೂನಲ್ (NCLT)ನ ಎದುರು ಅದು ಸ್ವಯಂಪ್ರೇರಿತವಾಗಿ ದಿವಾಳಿತನದ ನಿರ್ಣಯ ಪ್ರಕ್ರಿಯೆಗಳನ್ನು ಕೈಗೊಳ್ಳಲು ಅರ್ಜಿ ಸಲ್ಲಿಸಿತ್ತು. ಈ ಕುರಿತ ತನ್ನ ಆದೇಶವನ್ನು ಎನ್ಸಿಎಲ್ಟಿ ಕಾದಿರಿಸಿದೆ.







