ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಗೆ ಆದ್ಯತೆ ನೀಡಲಾಗುವುದು: ಸುನೀಲ್ ಕುಮಾರ್

ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಪರಿಸರ ಸ್ನೇಹಿ ಕೈಗಾರಿಕಾ ಕಾರಿಡಾರ್ ಈ ಮೂಲಕ ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ವಿ ಸುನೀಲ್ ಕುಮಾರ್ ಹೇಳಿದರು.
ಅವರು ಕಾರ್ಕಳ ವಿಕಾಸ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರನಾಳಿಕೆ ಬಿಡುಗಡೆ ಗೊಳಿಸಿ ಮಾತನಾಡಿ ದರು. ಕ್ಷೇತ್ರದ ಎಲ್ಲ ನಿವೇಶನ ರಹಿತ ಬಡವರಿಗೆ ನಿವೇಶನ, ಸೂರಿಲ್ಲದವರಿಗೆ ನೆರವು ,ಕ್ಷೇತ್ರದ ಎಲ್ಲ ಹಳ್ಳಿಗಳಲ್ಲಿ ಹಿಂದೂ ರುದ್ರ ಭೂಮಿಗಳ ನಿರ್ಮಾಣ, ತಾಲೂಕಿನಾದ್ಯಂತ ಭಜನಾ ಮಂಡಳಿಗಳ ಕಾರ್ಯ ಚಟುವಟಿಕೆಗಳಿಗೆ ಉತ್ತೇಜನ, ವಾಟರ್ ಗೇಮ್ಸ್ ಒಳಗೊಂಡಂತೆ ರಾಮಸಮುದ್ರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ, ಸ್ಥಳೀಯವಾಗಿ ವಾಣಿಜ್ಯೋದ್ಯಮ ವೃದ್ಧ, ಕಾರ್ಕಳದ ಪ್ರತಿ ಗ್ರಾಮಗಳಿಗೆ ಸುಸಜ್ಜಿತ ಬಸ್ ವ್ಯವಸ್ಥೆ. ಈ ಮೂಲಕ ಸಂಪರ್ಕ ಸೌಲಭ್ಯ ಸುಧಾರಣೆ. ಹೆಬ್ರಿಯಲ್ಲಿ ಐಟಿಐ ಕಾಲೇಜು ಸ್ಥಾಪನೆ. ಶೈಕ್ಷಣಿಕ ಆದ್ಯತೆಗಳಿಗೆ ಮಾನ್ಯತೆ. ಕ್ಷೇತ್ರದ ಪ್ರತಿ ಮನೆ ಮನೆಗೆ ಕುಡಿಯುವ ನೀರು ಸಂಪರ್ಕ, ಸಂಜೀವಿನಿ - ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ. ತಾಲೂಕಿನ ಧಾರ್ಮಿಕ ಕೇಂದ್ರಗಳ ಜೊತೆಗೆ ವಿಶೇಷವಾಗಿ ಸತ್ಯಸಾರಮಣಿ, ಮುಗೇರ್ಕಳ ದೈವಸ್ಥಾನಗಳ ಅಭಿವೃದ್ಧಿ ಹೆಬ್ರಿಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ. ಕಂಬಳ ಸೇರಿದಂತೆ ಗ್ರಾಮೀಣ ಕ್ರೀಡಾ ಚಟುವಟಿಕೆಗೆ ಒತ್ತು. ಪಂಚಾಯಿತಿ ಮಟ್ಟದಲ್ಲಿ ಕಿರು ಆಟದ ಮೈದಾನ ನಿರ್ಮಾಣ. ರಿಕ್ಷಾ/ಟ್ಯಾಕ್ಸಿ ಚಾಲಕರಿಗೆ ಆರೋಗ್ಯ ಭದ್ರತೆ ನೀಡಲಾಗುವುದು ಎಂದು ಸುನೀಲ್ ಕುಮಾರ್ ಹೇಳಿದರು.
ಸಭೆಯಲ್ಲಿ ಸಾಣೂರು ನರಸಿಂಹ ಕಾಮತ್, ಮಹೇಶ್ ಕುಡುಪುಲಾಜೆ, ಕೆಪಿ ಶೆಣೈ, ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಉಪಸ್ಥಿತರಿದ್ದರು.