ಮೈಸೂರು ವಿವಿ ಅತಿಥಿ ಉಪನ್ಯಾಸಕರಿಗೆ ಗೌರವಧನ ಪ್ರಕರಣ: ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್

ಬೆಂಗಳೂರು, ಮೇ 8: ಮೈಸೂರು ವಿಶ್ವ ವಿದ್ಯಾಲಯ ಹಾಗೂ ಅದರ ಸಂಯೋಜಿತ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಯುಜಿಸಿ ಮಾರ್ಗಸೂಚಿಗಳ ಅನ್ವಯ ಗೌರವಧನ ಪಾವತಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರಕಾರ ಮತ್ತು ವಿಶ್ವವಿದ್ಯಾಲಯದ ಮೇಲಿನ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಹೈಕೋರ್ಟ್ ಕೈಬಿಟ್ಟಿದೆ.
ಡಾ.ಎಸ್.ಶ್ವೇತಾ ಸೇರಿದಂತೆ ಮೈಸೂರು ವಿಶ್ವವಿದ್ಯಾಲಯ, ಮಹಾರಾಜ ಮತ್ತು ಯುವರಾಜ ಕಾಲೇಜಿನ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 10 ಮಂದಿ ಅತಿಥಿ ಉಪನ್ಯಾಸಕರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ಮಾಡಿದೆ.
ವಿಶ್ವ ವಿದ್ಯಾಲಯಗಳ ಧನಸಹಾಯ ಆಯೋಗ(ಯುಜಿಸಿ) 2019ರ ಜ.28ರಂದು ಪ್ರಕಟಿಸಿದ ಮಾರ್ಗಸೂಚಿಗಳ ಅನುಸಾರ ಅರ್ಜಿದಾರರಿಗೆ ಗೌರವಧನ ಪಾವತಿಸುವ ವಿಚಾರವನ್ನು ಮೈಸೂರು ವಿಶ್ವವಿದ್ಯಾಲಯವು ಮೂರು ವಾರದಲ್ಲಿ ಪರಿಗಣಿಸಬೇಕು. ಈ ವೇಳೆ ಯುಜಿಸಿ ಮಾರ್ಗಸೂಚಿಗಳ ಬಗ್ಗೆ ಗಮನ ಹರಿಸಬೇಕು. ಒಂದೊಮ್ಮೆ ಗೌರವಧನ ಪಡೆಯಲು ಅರ್ಜಿದಾರರು ಅರ್ಹರಾಗಿದ್ದಾರೆ ಎಂಬ ತೀರ್ಮಾನಕ್ಕೆ ಬಂದಲ್ಲಿ, ಕೂಡಲೇ ಗೌರವಧನ ಪಾವತಿಗೆ ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ಏಕ ಸದಸ್ಯಪೀಠ 2022ರ ಸೆಪ್ಟೆಂಬರ್ 28ರಂದು ಮಧ್ಯಂತರ ಆದೇಶ ಹೊರಡಿಸಿತ್ತು ಎಂದು ವಿಭಾಗೀಯ ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಅಲ್ಲದೆ, ಗೌರವಧನ ಪಾವತಿ ವಿಚಾರವನ್ನು ವಿಶ್ವವಿದ್ಯಾಲಯವು ಪರಿಗಣಿಸಿದ್ದು, ಅರ್ಜಿದಾರರು ಯುಜಿಸಿ ಮಾರ್ಗಸೂಚಿಗಳ ಪ್ರಕಾರ, ಗೌರವಧನ ಪಡೆಯಲು ಅರ್ಹರಿಲ್ಲ ಎಂದು ತೀರ್ಮಾನಿಸಿದೆ. ಆ ಮೂಲಕ ವಿವಿ ಏಕ ಸದಸ್ಯ ನ್ಯಾಯಪೀಠದ ಆದೇಶವನ್ನು ಪಾಲಿಸಿದೆ. ಇದರಿಂದ ಪ್ರತಿವಾದಿಗಳಾಗಿರುವ ಸರಕಾರ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ), ಮೈಸೂರು ವಿಶ್ವವಿದ್ಯಾಲಯ, ಮಹಾರಾಜ ಮತ್ತು ಯುವರಾಜ ಕಾಲೇಜು ಪ್ರಾಂಶುಪಾಲರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಮುಂದುವರಿಸಲಾಗದು ಎಂದು ತಿಳಿಸಿದ ವಿಭಾಗೀಯ ಪೀಠ ಅರ್ಜಿ ಇತ್ಯರ್ಥಪಡಿಸಿದೆ.







