ವಿವರಿಸಬಹುದಾದದ್ದನ್ನು ಕಡೆಗೂ ವಿವರಿಸಲಾಯಿತೆ?!
ಗಾದಿ May

ಇಲೆಕ್ಟ್ರಾನಿಕ್ ಮತದಾನ ಯಂತ್ರಗಳ (EVM) ಸಾಚಾತನವನ್ನು ಪ್ರತಿಪಾದಿಸಲು ರೂಪಿತವಾದಂತಹ, ಮತದಾರರು ತಾವೇ ಪರಿಶೀಲಿಸಬಲ್ಲ, ಕಾಗದದ ಮೇಲೆ ಮುದ್ರಣಗೊಂಡು ಮತ ಖಚಿತಪಡಿಸುವ (VVPAT) ಯಂತ್ರ ಬಳಕೆಯ ಬಗ್ಗೆ 2010ರಲ್ಲೇ ರಾಜಕೀಯ ಪಕ್ಷಗಳು ಒಪ್ಪಿಗೆ ಸೂಚಿಸಿದ್ದವಾದರೂ, ಅದು ಪೂರ್ಣಪ್ರಮಾಣದಲ್ಲಿ ಬಳಕೆಗೆ ಬಂದದ್ದು 2017ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಮತ್ತು ಆ ಬಳಿಕ 2019ರ ಲೋಕಸಭಾ ಚುನಾವಣೆಯಲ್ಲಿ.
ಈಗ ಅದು EVM ಗಳ ಅವಿಭಾಜ್ಯ ಅಂಗ. ಮತದಾರ ತನ್ನ ಮತ ಚಲಾಯಿಸಿದ ಬಳಿಕ, VVPAT ಯಂತ್ರದಲ್ಲಿ ಅದನ್ನು ನೋಡಿ, ತಾನು ಮತ ಹಾಕಿದ ಉಮೇದ್ವಾರರಿಗೇ ತನ್ನ ಮತ ಬಿದ್ದಿದೆ ಎಂಬುದನ್ನು ಖಚಿತಪಡಿಸಿಕೊಂಡು ಮತಗಟ್ಟೆಯಿಂದ ಹೊರಗೆ ಬರಬಹುದು.
ಸಹಜವಾಗಿಯೇ EVM ಹಾಗೂ VVPATಗಳೆರಡೂ ಯಂತ್ರಗಳಾಗಿದ್ದು, ಕರಾರುವಾಕ್ ಆಗಿ ಕಾರ್ಯನಿರ್ವಹಿಸಬೇಕೆಂಬ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಆ ಎರಡೂ ಯಂತ್ರಗಳಲ್ಲಿ ದಾಖಲಾಗಿರುವ ಮತಗಳ ಎಣಿಕೆಯ ಪ್ರಮಾಣವನ್ನು ಹೋಲಿಸಿ ನೋಡುವ ಬೇಡಿಕೆ ಎದ್ದಿತ್ತು. 2018ರ ಎಪ್ರಿಲ್ ತಿಂಗಳಿನಲ್ಲಿ ಸುಮಾರು 21 ರಾಜಕೀಯ ಪಕ್ಷಗಳು ಒಟ್ಟಾಗಿ, ಒಟ್ಟು ಮತದಾನವಾದ ಮತಗಟ್ಟೆಗಳಲ್ಲಿ ಕನಿಷ್ಠ ಶೇ. 50 ಮತಗಟ್ಟೆಗಳಲ್ಲಿ EVM ಹಾಗೂ VVPAT ಯಂತ್ರಗಳ ಫಲಿತಾಂಶವನ್ನು ಹೋಲಿಸಿ ನೋಡಬೇಕೆಂದು ಕೋರಿಕೆ ಸಲ್ಲಿಸಿದ್ದರು.
ಅದಕ್ಕೆ ಅವಕಾಶ ನಿರಾಕರಿಸಿದ ಸುಪ್ರೀಂಕೋರ್ಟ್, ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ರಾಂಡಂ ಆಗಿ ಆಯ್ದ ಐದು ಮತಗಟ್ಟೆಗಳ EVM ಹಾಗೂ VVPAT ಫಲಿತಾಂಶಗಳನ್ನು ಹೋಲಿಸಿ ನೋಡಬೇಕೆಂದು ಸೂಚಿಸಿತ್ತು. ಅದಾದ ಬಳಿಕವೂ ಹಲವು ಬಾರಿ EVM ಹಾಗೂ VVPAT ಯಂತ್ರಗಳ ನಂಬಿಗಸ್ಥಿಕೆಯ ಬಗ್ಗೆ ನ್ಯಾಯಾಲಯಗಳ ಎದುರು ಹೋದಾಗ ನ್ಯಾಯಾಲಯವು ಅದನ್ನು ತಿರಸ್ಕರಿಸಿದೆ ಮತ್ತು ಕಡೆಕಡೆಗೆ ಅರ್ಜಿದಾರರಿಗೆ ದಂಡ ವಿಧಿಸಿದ್ದೂ ಇದೆ.
2019ರ ಲೋಕಸಭಾ ಚುನಾವಣೆ ವೇಳೆ, ಸುಪ್ರೀಂ ಕೋರ್ಟಿನ ಸೂಚನೆಯಂತೆ, ವಿಧಾನಸಭಾ ಕ್ಷೇತ್ರವೊಂದರ ತಲಾ ಐದು ಯಂತ್ರಗಳ ಫಲಿತಾಂಶವನ್ನು ವಿಶ್ಲೇಷಿಸುವುದೆಂದು ತೀರ್ಮಾನಿಸಿ, ದೇಶದ 20,687 ಮತಗಟ್ಟೆಗಳ EVM ಹಾಗೂ VVPAT ಯಂತ್ರಗಳ ಕಾಗದದ ಸ್ಲಿಪ್ ಮತ ಎಣಿಕೆಗಳನ್ನು ಹೋಲಿಸಿ ನೋಡಲಾಗಿತ್ತು. ಅದರಲ್ಲಿ ರಾಜಸ್ಥಾನ, ಹಿಮಾಚಲ ಪ್ರದೇಶ, ಮಣಿಪುರ, ಮೇಘಾಲಯ ಮತ್ತು ಆಂಧ್ರಪ್ರದೇಶ ರಾಜ್ಯಗಳ ಒಟ್ಟು ಎಂಟು ಯಂತ್ರಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು.
ಹೆಚ್ಚಿನ ಪ್ರಕರಣಗಳಲ್ಲಿ ಒಂದೆರಡು ಮತಗಳ ಅಂತರ ಮಾತ್ರ ಇದ್ದು, ಒಂದು ಕಡೆ ಮಾತ್ರ 34 ಮತಗಳ ಅಂತರ ಇತ್ತು ಎಂದು ಆಯೋಗದ ಅಧಿಕಾರಿಗಳು ಹೇಳಿದ್ದರಲ್ಲದೆ, ಇವೆಲ್ಲವೂ ಮಾನವ ಲೋಪಗಳಿಂದಾಗಿ ಸಂಭವಿಸಿವೆ ಮತ್ತು ಈ ಮಿಸ್‌ಮ್ಯಾಚಿನ ಶೇಕಡಾವಾರು ಪ್ರಮಾಣ ಶೇ. 0.0004. ಅದು ಎಲ್ಲೂ ಫಲಿತಾಂಶದ ಮೇಲೆ ಪ್ರಭಾವ ಬೀರುವಂತಹದಾಗಿರಲಿಲ್ಲ. ಹಾಗಾಗಿ ಅದನ್ನು ನಿರ್ಲಕ್ಷಿಸಬಹುದು ಎಂದು ಹೇಳಲಾಗಿತ್ತು. ಜೊತೆಗೇ, ಈ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಬಿದ್ದರೆ ತಾಂತ್ರಿಕ ಪರಿಣತರ ಸಮಿತಿಯಿಂದಲೂ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಲಾಗಿತ್ತು.
ಒಂದು ಲೋಕಸಭಾ ಚುನಾವಣೆ ಎಂದರೆ, ಸರಿಸುಮಾರು 10.35 ಲಕ್ಷ ಮತಯಂತ್ರಗಳು ಬಳಕೆ ಆಗುತ್ತಿರುತ್ತವೆ. ಅಂದರೆ ಪ್ರತೀ ಲೋಕಸಭಾ ಕ್ಷೇತ್ರಕ್ಕೆ ಸರಾಸರಿ 2,000 EVM ಹಾಗೂ VVPAT ಯಂತ್ರಗಳು ಬಳಕೆ ಆಗುತ್ತವೆ. ಈ 2,000 ಯಂತ್ರಗಳಲ್ಲಿ ಕೇವಲ 5ನ್ನು ಆಯ್ದು ಪರಿಶೀಲಿಸಿದಾಗಲೂ ಒಟ್ಟು ಎಂಟರಲ್ಲಿ ವ್ಯತ್ಯಾಸಗಳು ಕಂಡುಬಂದಿವೆ ಎಂಬುದೂ ಆಶ್ಚರ್ಯದ ಸಂಗತಿಯೇ! ಏಕೆಂದರೆ ಅವು ಮನುಷ್ಯರಲ್ಲ-ಯಂತ್ರಗಳು!! ಈ ಪರಿಶೀಲನೆಯು ಕೇವಲ ಒಟ್ಟು ಚಲಾಯಿತ ಮತ ಮತ್ತು VVPATನಲ್ಲಿ ಸಂಗ್ರಹವಾದ ಕಾಗದಗಳಿಗೆ ಮಾತ್ರ ಸೀಮಿತವೇ? ಅಥವಾ ಯಾವಯಾವ ಪಕ್ಷಗಳಿಗೆ ಎಷ್ಟೆಷ್ಟು ಮತ ಸಿಕ್ಕಿದೆ ಎಂಬುದನ್ನು ಆಧರಿಸಿದೆಯೇ? ಯಾವ ಪಕ್ಷದ ಮತ ಹೆಚ್ಚಿತ್ತು? ಎಂಬಿತ್ಯಾದಿ ವಿವರಗಳು ಸಾರ್ವಜನಿಕವಾಗಿ ಸ್ಪಷ್ಟವಿಲ್ಲ.
ಈ ಎಂಟು EVM ಹಾಗೂ VVPAT ಗಳಲ್ಲಿ ಕಂಡುಬಂದ ವ್ಯತ್ಯಾಸಗಳನ್ನು ಅಲ್ಲಿಗೇ ಕೈಬಿಡಲಾಯಿತೇ ಅಥವಾ ಮುಂದೆ ತಾಂತ್ರಿಕ ಪರಿಣತರ ಸಮಿತಿ ಅದನ್ನು ಪರಿಶೀಲಿಸಿತೇ? ಅದು ಏನು ವರದಿ ಕೊಟ್ಟಿತು? ಎಂಬುದನ್ನೆಲ್ಲ ಚುನಾವಣಾ ಆಯೋಗವೂ ಪಾರದರ್ಶಕವಾಗಿ ಬಹಿರಂಗಪಡಿಸಿದಂತಿಲ್ಲ; ಮಾಧ್ಯಮಗಳೂ ಆಸಕ್ತಿ ವಹಿಸಿ ಅದನ್ನು ಫಾಲೋ ಅಪ್ ಮಾಡಿಲ್ಲ.
EVM ಹಾಗೂ VVPAT ಯಂತ್ರಗಳಿಗೆ ಸಂಬಂಧಿಸಿದಂತೆ ಶೇ. 100 ವಿಶ್ವಾಸ ಜನಸಾಮಾನ್ಯರಲ್ಲಿ ಇನ್ನಷ್ಟೇ ಮೂಡಬೇಕಾಗಿರುವಾಗ, ಈ ರೀತಿಯ ಅರ್ಧಂಬರ್ಧ ಕ್ರಮಗಳು ಸಂಶಯದ ಬೆಂಕಿಗೆ ಇನ್ನಷ್ಟು ತುಪ್ಪಸುರಿಯುತ್ತವೆಯೇ ಹೊರತು ಅದರಿಂದ ಬೇರೇನೂ ಲಾಭವಿಲ್ಲ. ಈ ಯಂತ್ರಗಳು ಶೇ. 100 ದೋಷರಹಿತ ಎಂದಾದರೆ, ಲೋಕಸಭಾ ಚುನಾವಣೆಗಳ ಸಂದರ್ಭದ ಈ ವರದಿಯಾದ ವ್ಯತ್ಯಯದ ಬಗ್ಗೆ ಶ್ವೇತಪತ್ರವೊಂದನ್ನು ಚುನಾವಣಾ ಆಯೋಗ ಹೊರಡಿಸಬೇಕು.
ಜೊತೆಗೇ, ಈಗ ಕರ್ನಾಟಕದಲ್ಲಿ ಮತ ಎಣಿಕೆಯ ಬಳಿಕ, ಸುಪ್ರೀಂ ಕೋರ್ಟಿನ ಸೂಚನೆಯಂತೆ ರಾಂಡಂ ತಪಾಸಣೆಯ ವೇಳೆ, ಅಂತಹ ವ್ಯತ್ಯಯಗಳು ಕಂಡುಬಂದದ್ದು ಹೌದಾದರೆ, ಜನರ ವಿಶ್ವಾಸ ಗಳಿಸಿಕೊಳ್ಳುವ ನಿಟ್ಟಿನಲ್ಲಿ, ಇಡಿಯ ರಾಜ್ಯದ ಎಲ್ಲ ಮತಗಟ್ಟೆಗಳ EVM ಹಾಗೂ VVPAT ಯಂತ್ರಗಳಲ್ಲಿ ದಾಖಲಾದ ಫಲಿತಾಂಶಗಳ ಸಂಪೂರ್ಣ ಆಡಿಟ್‌ಅನ್ನು ಪಾರದರ್ಶಕವಾಗಿ ನಡೆಸಿ, ಅದರ ವರದಿಯನ್ನು ಜನರ ಮುಂದಿಡಬೇಕು. ಅದಕ್ಕೆ ಅಗತ್ಯವಿರುವ ಮೆಕ್ಯಾನಿಕಲ್ ಸಾರ್ಟರ್‌ಗಳನ್ನು ಈಗಲೇ ವ್ಯವಸ್ಥೆ ಮಾಡಿಕೊಳ್ಳಬೇಕು. EVM ಹಾಗೂ VVPATಗಳ ಕುರಿತ ಶಂಕೆಗಳು ಶಾಶ್ವತವಾಗಿ ದೂರವಾಗುವಂತಹ ಕ್ರಮ ಕೈಗೊಳ್ಳಬೇಕು.
ಈಗ ಸದ್ಯಕ್ಕೆ ಚುನಾವಣಾ ನಿಯಮಗಳ [Rule 56D (4) (b)] ಪ್ರಕಾರ EVM ಹಾಗೂ VVPAT ಗಳ ನಡುವೆ ಗಣನೆಯಲ್ಲಿ ವ್ಯತ್ಯಾಸ ಕಾಣಿಸಿಕೊಂಡರೆ, ಯಂತ್ರದ ಗಣನೆಗಿಂತ VVPAT ಕಾಗದದ ಚೀಟಿಯ ಗಣನೆಗೇ ಮಾನ್ಯತೆ ಎಂದು ವಿಧಿಸಲಾಗಿದೆ. ಪ್ರಶ್ನೆ ಅದಲ್ಲ. ಯಂತ್ರವೊಂದರಲ್ಲಿ ವ್ಯತ್ಯಾಸ ಏಕಾದರೂ ಕಾಣಿಸಿಕೊಳ್ಳಬೇಕು?! 1982-83ರಲ್ಲಿ ಮೊದಲ ಬಾರಿಗೆ ಬಳಕೆಗೆ ಬಂದ EVM ಯಂತ್ರ, ಅದಾಗಿ 40 ವರ್ಷಗಳ ಬಳಿಕ ಈಗಲೂ ಪರಿಪೂರ್ಣವಾಗಿ ಸಂಶಯಮುಕ್ತಗೊಂಡಿಲ್ಲ ಎಂದರೆ, ಅದರ ಹೊಣೆಯನ್ನು ಚುನಾವಣಾ ಆಯೋಗವೇ ಹೊರಬೇಕು. ನ್ಯಾಯಾಲಯಗಳ ವ್ಯಾಪ್ತಿ ಈ ವಿಚಾರದಲ್ಲಿ ಸೀಮಿತವಾದುದು. ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯುವಂತೆ ನೋಡಿಕೊಳ್ಳುವ ಸಾಂವಿಧಾನಿಕ ಹೊಣೆ ಚುನಾವಣಾ ಆಯೋಗದ್ದೇ.







