ಪೆರಿಯಾರ್‌ರ ಜೀವನ ಕಥನ
ಈ ಹೊತ್ತಿನ ಹೊತ್ತಿಗೆ
ಬಾಲ್ಯದಿಂದಲೇ ಅಸಾಧಾರಣ ಹಟ, ವಿಚಕ್ಷಣ ಬುದ್ದಿ, ಚಿಕ್ಕ ವಯಸ್ಸಿಗೆ ಓದಿಗೆ ತಿಲಾಂಜಲಿ ನೀಡಿ ಅಂದುಕೊಂಡದ್ದನ್ನು ಸಾಧಿಸಿ ತೋರಿಸಿದ ಧೀಮಂತರು ಪೆರಿಯಾರ್ ರಾಮಸ್ವಾಮಿ. ತಮ್ಮ ಹೋರಾಟದಿಂದಲೇ ಧಾರ್ಮಿಕ ಅಂಧ ಶ್ರದ್ಧೆ, ಕಂದಾಚಾರ, ದೇವರು, ಧರ್ಮದ ಹೆಸರಲ್ಲಿ ಶೋಷಣೆ ಮಾಡುವವರ ವಿರುದ್ಧ ಸೆಟೆದು ನಿಂತು ದ್ರಾವಿಡ ಚಳವಳಿಯ ನೇತಾರರಾದವರು ಅವರು. ಅವರ ಬಾಲ್ಯ, ವ್ಯಕ್ತಿತ್ವ, ಹೋರಾಟ, ಸಂಘಟನೆ ಹೀಗೆ ಜೀವನದ ಹೋರಾಟದ ಕಥನವನ್ನು ಬಿಡಿ ಬಿಡಿಯಾಗಿ ತಿಳಿಸಿಕೊಡುವ ಕೃತಿಯೇ ಡಾ. ಸಿ. ಚಂದ್ರಪ್ಪಅವರ ‘ಪೆರಿಯಾರ್’ ಕುರಿತ ಜೀವನ ಚರಿತ್ರೆ
ಡಾ.ಸಿ. ಚಂದ್ರಪ್ಪಅವರು ಸಂಗ್ರಹಾನುವಾದ ವಾಗಿಸಿರುವ ಈ ಕೃತಿಯಲ್ಲಿ 40 ಅಧ್ಯಾಯಗಳಿವೆ. ಪೆರಿಯಾರ್ ಅವರ ಜೀವನ ಚರಿತ್ರೆಯಾಗಿರುವುದರಿಂದ ಎಲ್ಲೂ ಉತ್ಪ್ರೇಕ್ಷೆಯ ಹೇಳಿಕೆಗಳು, ರೋಚಕ ವಿವರಣೆಗಳು ಕಣ್ಣಿಗೆ ಕಾಣಿಸುವುದಿಲ್ಲ. ಹಲವಾರು ಆಧಾರ ಗ್ರಂಥಗಳನ್ನು ಅಧ್ಯಯನ ಮಾಡಿ ರೂಪಿಸಿರುವ ಈ ಕೃತಿಯು ಸರಳವಾದ ನಿರೂಪಣಾ ಶೈಲಿಯಿಂದ ಗಮನಸೆಳೆಯುತ್ತದೆ. ಪ್ರತೀ ಘಟನೆಗಳನ್ನು ಅನುಕ್ರಮವಾಗಿ ಜೋಡಿಸಿ ಚರ್ಚಿಸಿರುವುದರಿಂದ ಲೇಖನಗಳು ವಿಸ್ತಾರವಾಗಿವೆ.
ಹಾಗೆಯೇ ಕೃತಿಯಲ್ಲಿ ಕಾಲದ ಕಟ್ಟಳೆಯೊಳಗೆ ನಡೆದ ಸಾಮಾಜಿಕ ರಾಜಕೀಯ ಚರ್ಚೆಗಳು ನಡೆದಿರುವುದನ್ನು ವಿಭಿನ್ನ ಆಯಾಮದಲ್ಲಿ ಚರ್ಚಿಸಿದ್ದಾರೆ. ಹಾಗಾಗಿ ಜೀವನ ಚರಿತ್ರೆಯ ಕಥಾನಕವು ವ್ಯಕ್ತಿಯ ಇನ್ನೊಂದು ಮುಖವನ್ನು ಅನಾವರಣ ಮಾಡುವುದರಿಂದ ಕುತೂಹಲ ಸಹಜವಾಗಿಯೇ ಇರುತ್ತದೆ. ಸಾಮಾನ್ಯವಾಗಿ ಜೀವನ ಚರಿತ್ರೆಗಳು ಅಸಂಗತವಾಗಿದ್ದುಕೊಂಡೇ ಸಮಗ್ರತೆಯನ್ನು ನಿರೂಪಿಸಲು ಪ್ರಯತ್ನಿಸುತ್ತವೆ. ಆದರೆ ಚಂದ್ರಪ್ಪ ಬರೆದಿರುವ ಈ ಕೃತಿಯು ಹಲವು ಕಾರಣಕ್ಕೆ ಸಾಕಷ್ಟು ವಿವರಗಳನ್ನು ಸಂಗ್ರಹಿಸಿ ಬರೆದಿರುವುದರಿಂದ ಕನ್ನಡದಲ್ಲಿ ಪೆರಿಯಾರ್ ಅವರನ್ನು ತಿಳಿಯಲು ಸಾಕಷ್ಟು ಮಟ್ಟಿಗೆ ಈ ಕೃತಿ ಆಸರೆಯಾಗುತ್ತದೆ.
ಪೆರಿಯಾರ್ ದೇಶದಲ್ಲಿ ಉಂಟು ಮಾಡಿದ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿದ ಧೀಮಂತ ನಾಯಕ. ತಮಿಳುನಾಡಿನ ಈರೋಡಿನಲ್ಲಿ ಜನಿಸಿದ ಪೆರಿಯಾರ್ ಹತ್ತನೇ ವಯಸ್ಸಿಗೆ ಶಾಲೆಗೆ ಗುಡ್ ಬೈ ಹೇಳಿ ಸಾರ್ವಜನಿಕ ಜೀವನಕ್ಕೆ ಧುಮುಕಿದರು.ಸಮಾಜದಲ್ಲಿ ಇದ್ದ ಜಾತಿ ಪದ್ಧತಿ, ಶೋಷಣೆ ತೊಡೆದು ಹಾಕಲು ಅವಿರತ ಪ್ರಯತ್ನ ಪಟ್ಟರು.ನಿರಂತರವಾಗಿ ಹೋರಾಡುತ್ತಲೇ ಬಂದು ನಾಸ್ತಿಕ ಪರಂಪರೆಗೆ ಭದ್ರ ಬುನಾದಿ ಹಾಕಲು ಶ್ರಮಿಸಿದ ಕೆಚ್ಚೆದೆಯ ಹೋರಾಟಗಾರ.
ಭಾರತ ಸ್ವತಂತ್ರವಾದ ನಂತರದಲ್ಲಿ ಅನೇಕ ಕ್ರಾಂತಿಕಾರಕ ಚಳವಳಿಗಳು ನಡೆದು ಸಾರ್ವಜನಿಕರನ್ನು ಹೊಸದಿಕ್ಕಿನ ಕಡೆ ಕೊಂಡೊಯ್ಯುತ್ತಿದ್ದಾಗ ತಮಿಳುನಾಡಿನಲ್ಲಿ ಪೆರಿಯಾರ್ ಆರಂಭಿಸಿದ ಸ್ವಾಭಿಮಾನ ಚಳವಳಿ, ದ್ರಾವಿಡ ಕಳಂಗಮ್ ಹೋರಾಟಗಳು ಚರಿತ್ರೆಯಲ್ಲಿ ಹೆಚ್ಚು ಸುದ್ದಿ ಮಾಡಿದವುಗಳು ಮತ್ತು ಚಾರಿತ್ರಿಕವಾಗಿಯೂ ಮುಖ್ಯವಾದ ಘಟನೆಗಳು.
ಇಡೀ ಪುಸ್ತಕ ಒಂದು ವೈಚಾರಿಕ ಪ್ರಜ್ಞೆಯ ಅರಿವಿನ ಮಾರ್ಗವಾಗಿ ಕಾಣುತ್ತದೆ. ಹಾಗೆ ಹಲವು ಹೋರಾಟಗಳನ್ನು ನೆನಪಿಸುತ್ತದೆ. ಪೆರಿಯಾರ್ ಅವರನ್ನು ಈಗಲೂ ಕೆಲವರು ಮತ್ತು ಕೆಲ ಸಮುದಾಯವು ಬೇರೆಯದೇ ಆದ ನೋಟದಿಂದ ನೋಡುತ್ತವೆ. ವ್ಯಕ್ತಿಯ ವಿಚಾರಕ್ಕೆ ಗೌರವ ಕೊಡಬೇಕು. ಅದನ್ನು ಬಿಟ್ಟು ವೈಯಕ್ತಿಕ ನೆಲೆಯಲ್ಲಿ ಅವರನ್ನು ತಿರಸ್ಕಾರ ಮಾಡುವ ಸಾಂಪ್ರದಾಯಿಕ ಮೌಢ್ಯಗಳನ್ನು ಪುರಸ್ಕರಿಸುವುದು ಎಷ್ಟು ಸರಿ ಎಂಬುದನ್ನು ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ.
ಪೆರಿಯಾರ್ ಬಿತ್ತಿದ ವೈಚಾರಿಕ ಚಿಂತನೆಯ ಬೀಜವು ಮೊಳಕೆಯಾಗಿ ಸಸಿಯಾಗಿ ಮರವಾಗಿ ಅಲ್ಲಲ್ಲಿ ಬೆಳೆಯುತ್ತಿರುವುದನ್ನು ಅಲ್ಲಗಳೆಯುವುದಕ್ಕೆ ಆಗುವುದಿಲ್ಲ. ಪತ್ರಕರ್ತರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಹೀಗೆ ಪೆರಿಯಾರ್ ಅವರ ಬಾಲ್ಯದಿಂದ ನಿಧನದವರೆವಿಗೂ ಸವೆಸಿದ ಹೆಜ್ಜೆಗುರುತುಗಳನ್ನು ಹಿಡಿಯಾಗಿ ಕೊಟ್ಟಿರುವ ಡಾ.ಸಿ. ಚಂದ್ರಪ್ಪ ಅವರ ಶ್ರಮವನ್ನು ಮೆಚ್ಚಬೇಕು. ಪೆರಿಯಾರ್ ಮತ್ತು ಇತರ ಸಾಮಾಜಿಕ ಕ್ರಾಂತಿಕಾರಿಗಳನ್ನು ಕುರಿತು ಅಧ್ಯಯನ ಮಾಡಲು ಇದೊಂದು ಆಕರಗ್ರಂಥವಾಗಲಿದೆ. ಅಲ್ಲಲ್ಲಿ ಉಲ್ಲೇಖಗಳ ಸಮೇತ ಲೇಖನಗಳನ್ನು ಚರ್ಚಿಸಿರುವುದರಿಂದ ಕೃತಿಯನ್ನು ಓದಬೇಕೆನಿಸುತ್ತದೆ.
ಪೆರಿಯಾರ್ ಅವರ ಚಿಂತನೆ, ರಾಜಕೀಯ ಆಕರ್ಷಣೆ, ವೈಕ್ಕಂ ಪ್ರಕರಣ, ಕೋಮುವಾದದ ದಳ್ಳುರಿ, ದ್ರಾವಿಡ ಕಳಗಂ, ಜಸ್ಟಿಸ್ ಪಾರ್ಟಿ ಮತ್ತು ಸ್ವಾಭಿಮಾನಿ ಸಂಸ್ಥೆ, ಅಂಬೇಡ್ಕರ್ ಮತ್ತು ಪೆರಿಯಾರ್ ಜೊತೆಗಿನ ಸಾಮರಸ್ಯದ ನಂಟು ಈ ಕೃತಿಯ ಹೈಲೈಟ್ ಆಗಿವೆ. ಒಟ್ಟಾರೆ ಈ ಕೃತಿಯನ್ನು ಬಹು ಎಚ್ಚರಿಕೆಯಿಂದ ಸಂಗ್ರಹ ಅನುವಾದ ಮಾಡಿರುವ ಚಂದ್ರಪ್ಪಅವರ ಕಾರ್ಯ ಮೆಚ್ಚುಗೆಯಾದುದು. ಅಂಬೇಡ್ಕರ್ ಅವರ ಬದುಕಿನ ಹೋರಾಟಗಳ ಸಮಗ್ರ ವಿವರಗಳನ್ನೊಳಗೊಂಡ ‘ಮಹಾ ಮಾನವನ ಮಹಾಯಾನ’ ಪುಸ್ತಕವನ್ನು ಬರೆದು ಕನ್ನಡ ಪುಸ್ತಕ ಲೋಕಕ್ಕೆ ದೊಡ್ಡ ಕಾಣಿಕೆ ನೀಡಿರುವ ಚಂದ್ರಪ್ಪಅವರು ನಿಜದ ಅಂಬೇಡ್ಕರ್ ವಾದಿಯಾಗಿದ್ದಾರೆ.
ಈಗ ಈ ಕೃತಿಯು ಹಲವು ಇಂಗ್ಲಿಷ್ ಮತ್ತು ಕನ್ನಡ ಪುಸ್ತಕಗಳನ್ನು ಅಧ್ಯಯನ ಮಾಡುವುದರ ಜೊತೆಗೆ ಆಯಾಯ ಕಾಲಮಾನದಲ್ಲಿ ಬಂದ ವೃತ್ತ ಪತ್ರಿಕೆಗಳನ್ನು ಪರಾಮರ್ಶಿಸಿ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಹೀಗಾಗಿ ಕನ್ನಡದಲ್ಲಿ ಪೆರಿಯಾರ್ ಅವರನ್ನು ತಿಳಿಯಲು ಇದ್ದ ಬಹುದೊಡ್ಡ ಕೊರತೆಯನ್ನು ನಿವಾರಿಸುವಲ್ಲಿ ಈ ಕೃತಿಯು ನೆರವಾಗುತ್ತದೆ.







