ಅನ್ನ ಮಾಡದೆ ಕೇವಲ ಸಾರು ಸಿದ್ಧಪಡಿಸಿದ್ದಕ್ಕಾಗಿ ಪತ್ನಿಯ ಕೊಲೆಗೈದ ವ್ಯಕ್ತಿಯ ಬಂಧನ!

ಸಂಬಲ್ಪುರ: ಅನ್ನ ಮಾಡಲಿಲ್ಲವೆಂದು ತನ್ನ ಪತ್ನಿಯನ್ನು ಹತ್ಯೆಗೈದ ಆರೋಪದಲ್ಲಿ ಆಕೆಯ ಪತಿಯನ್ನು ಸಂಬಲ್ಪುರ ಜಿಲ್ಲೆಯಿಂದ ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ಮಾಡಿದೆ.
ಈ ಘಟನೆಯು ರವಿವಾರ ರಾತ್ರಿ ಜಮಾಂಕಿರ ಪೊಲೀಸ್ ಠಾಣೆ ವ್ಯಾಪ್ತಿಯ ನುವಾಧಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆರೋಪಿಯನ್ನು 40 ವರ್ಷ ವಯಸ್ಸಿನ ಸಂತಾನ್ ಧಾರುವ ಎಂದು ಗುರುತಿಸಲಾಗಿದ್ದು, ಆಕೆಯ ಪತ್ನಿಯನ್ನು 35 ವರ್ಷದ ಪುಷ್ಪಾ ಧಾರುವಾ ಎಂದು ಗುರುತಿಸಲಾಗಿದೆ.
ಸಂತಾನ್ ಮನೆಗೆ ಬಂದಾಗ ಪತ್ನಿ ಪುಷ್ಪಾ ಅನ್ನ ಮಾಡದೆ ಕೇವಲ ಸಾರು ಸಿದ್ಧಪಡಿರುವುದು ಕಂಡು ಬಂದಿದೆ. ಈ ವಿಷಯ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಇದರಿಂದ ಕೆರಳಿದ ಸಂತಾನ್ ಆಕೆಯನ್ನು ದೊಣ್ಣೆಯಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂತಾನ್ ಹಾಗೂ ಪುಷ್ಪಾ ದಂಪತಿಗಳಿಗೆ ಓರ್ವ ಪುತ್ರಿ ಹಾಗೂ ಓರ್ವ ಪುತ್ರನಿದ್ದಾನೆ. ಈ ಪೈಕಿ ಪುತ್ರಿಯು ಕುಚ್ಚಿಂಡಾದಲ್ಲಿ ಮನೆಗೆಲಸದ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಜಗಳ ನಡೆದ ರವಿವಾರ ರಾತ್ರಿ ಆತನ ಪುತ್ರ ತನ್ನ ಗೆಳೆಯನ ಮನೆಗೆ ಮಲಗಲು ತೆರಳಿದ್ದಾನೆ.
ಬೆಳಗ್ಗೆ ಆತನ ಪುತ್ರನು ಮನೆಗೆ ಮರಳಿದಾಗ ತನ್ನ ತಾಯಿಯ ಹತ್ಯೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ನಂತರ ಆತ ಈ ಸುದ್ದಿಯನ್ನು ಪೊಲೀಸರಿಗೆ ಮುಟ್ಟಿಸಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೃತ ದೇಹವನ್ನು ವಶಕ್ಕೆ ಪಡೆದು, ಆರೋಪಿ ಪತಿಯನ್ನು ಬಂಧಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಮಾಂಕಿರಾ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ಪ್ರೇಮ್‌ಜಿತ್ ದಾಸ್, ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಆರೋಪಿ ಪತಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.







