ಮಂಗಳೂರು: MCC ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ

ಮಂಗಳೂರು, ಮೇ 9: ಕರಾವಳಿ ಕರ್ನಾಟಕದ ಪ್ರಥಮ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ಗಳಲ್ಲಿ ಒಂದಾದ ಎಂ.ಸಿ.ಸಿ. ಬ್ಯಾಂಕ್ ಲಿಮಿಟೆಡ್‌ನ ಸಂಸ್ಥಾಪಕರ ದಿನವನ್ನು ಮೇ 7ರಂದು ಬ್ಯಾಂಕಿನ ಆಡಳಿತ ಕಚೇರಿ ಆವರಣದಲ್ಲಿ 111 ವರ್ಷಗಳ ಸೇವೆಯನ್ನು ಪೂರ್ಣ ಗೊಳಿಸುವುದರೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಧರ್ಮಗುರು ವಂ. ಬೊನವೆಂಚರ್ ನಝರೆತ್ ಪವಿತ್ರ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಎಂ.ಸಿ.ಸಿ. ಬ್ಯಾಂಕ್ ಸಂಸ್ಥಾಪಕ ಪಿ.ಎಫ್.ಎಕ್ಸ್.ಸಲ್ದಾನ ಸಮಾಜದ ಅನುಕೂಲಕ್ಕಾಗಿ ಶ್ರೇಷ್ಠ ಸಂಸ್ಥೆಯನ್ನು ಪ್ರಾರಂಭಿಸಿದ ದೂರದೃಷ್ಟಿಯ ಉದಾತ್ತ ಕಾರ್ಯವನ್ನು ಸ್ಮರಿಸಿ, ದಿನದ ಮಹತ್ವವನ್ನು ವಿವರಿಸಿದರು.
ಕಳೆದ 111 ವರ್ಷಗಳಿಂದ ಎಂ.ಸಿ.ಸಿ. ಬ್ಯಾಂಕ್‌ನಿಂದ ಸಮಾಜಕ್ಕೆ ಉತ್ತಮ ಕೆಲಸವಾಗಿದೆ. ಮುಂದೆಯೂ ಬ್ಯಾಂಕಿನ ಅಭಿವೃದ್ಧಿಗೆ ಆಡಳಿತ ಮಂಡಳಿ ದೂರದೃಷ್ಟಿಯುಳ್ಳವರಾಗಿದ್ದು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಬಳಿಕ ನಡೆದ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಸ್ವಾಗತಿಸಿ ಮಾತನಾಡಿ, 2018ರಲ್ಲಿ ಬ್ಯಾಂಕಿನ ಆಡಳಿತವನ್ನು ವಹಿಸಿಕೊಂಡ ಪ್ರಸಕ್ತ ಮಂಡಳಿಯು ಈ ಮಹಾನ್ ಸಂಸ್ಥೆಯ ದಾರ್ಶನಿಕ ಸಂಸ್ಥಾಪಕರಾದ ಪಿ.ಎಫ್.ಎಕ್ಸ್. ಸಲ್ದಾನರನ್ನು ಗೌರವಿಸಲು, 2022ರಿಂದ ಸಂಸ್ಥಾಪಕರ ದಿನವನ್ನು ಆಚರಿಸಲು ಪ್ರಾರಂಭಿಸಿದೆ. ಇದರಿಂದ ದಾರ್ಶನಿಕ ಸಂಸ್ಥಾಪಕರ ಮಹತ್ತರ ಕಾರ್ಯಗಳು - ನಿರ್ದೇಶಕರು, ಸದಸ್ಯರು ಮತ್ತು ಸಿಬ್ಬಂದಿಯ ಮನಸ್ಸಿನಲ್ಲಿ ಉಳಿಯುತ್ತವೆ ಎಂದರು.
ಬ್ಯಾಂಕ್ ಕಳೆದ ವರ್ಷದಲ್ಲಿ ಗ್ರಾಹಕರ ಸಭೆ, ಮಹಿಳಾ ದಿನಾಚರಣೆ, ಶತಮಾನೋತ್ಸವದ ನಂತರದ ದಶಮಾನೋತ್ಸವ, ಎನ್‌ಆರ್‌ಐ ಸಭೆ ಇತ್ಯಾದಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿ, ಬ್ಯಾಂಕ್‌ನ ಗ್ರಾಹಕರು ಮತ್ತು ಷೇರುದಾರರಲ್ಲಿ ಅಭಿಮಾನ ಮೂಡುವಂತೆ ಮಾಡಿದೆ. ಬ್ಯಾಂಕ್ ಸೊಸೈಟಿಯ ಅಗತ್ಯಗಳಿಗೆ ಸ್ಪಂದಿಸುವ ಮತ್ತು ಗ್ರಾಹಕರ, ಷೇರುದಾರರ ವಿಶ್ವಾಸ ಗಳಿಸುವ ಪ್ರಬಲ ಹಣಕಾಸು ಸಂಸ್ಥೆಯಾಗಿ ಉಳಿದುಕೊಂಡಿದ್ದು, ಕಳೆದ 5 ವರ್ಷಗಳಿಂದ ಬ್ಯಾಂಕ್‌ನ ಕಾರ್ಯನಿರ್ವಹಣೆಯಲ್ಲಿ ಸ್ಪಷ್ಟವಾಗಿದೆ ಎಂದು ಹೇಳಿದರು.
ಮಂಗಳೂರಿನ ಪ್ರಾವಿಟ್ ಫುಡ್ ಪ್ರಾಡಕ್ಟ್‌ನ ವ್ಯವಸ್ಥಾಪಕ ನಿರ್ದೇಶಕ ವಿನ್ಸೆಂಟ್ ಕುಟಿನ್ಹಾ ಮಾತನಾಡಿ, ಕಳೆದ ವರ್ಷಗಳಲ್ಲಿ ಬ್ಯಾಂಕ್ ಸಾಧಿಸಿರುವ ಪ್ರಗತಿಯನ್ನು ಶ್ಲಾಘಿಸಿ, ಬ್ಯಾಂಕ್ ತನ್ನ ಕಾರ್ಯಕ್ಷೇತ್ರವನ್ನು ಎರಡು ಜಿಲ್ಲೆಗಳಿಂದ 7 ಜಿಲ್ಲೆಗಳಿಗೆ ವಿಸ್ತರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಬ್ಯಾಂಕಿನ ಅಭಿವೃದ್ಧಿಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಒಗ್ಗೂಡಿ ಶ್ರಮಿಸುವಂತೆ ಕೋರಿ, ಮುಂದಿನ ಕಾರ್ಯಗಳಿಗೆ ಶುಭ ಹಾರೈಸಿದರು
ವೇದಿಕೆಯಲ್ಲಿ ಅತಿಥಿಗಳಿಂದ ಸ್ಥಾಪಕರ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಇದೇವೇಳೆ ಮೇ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡವರನ್ನು ಹುಟ್ಟುಹಬ್ಬದ ಕೇಕ್ ಕತ್ತರಿಸಿ ಸನ್ಮಾನಿಸಲಾಯಿತು.
ಬ್ಯಾಂಕ್ ನಿರ್ದೇಶಕರುಗಳಾದ ಡೇವಿಡ್ ಡಿಸೋಜ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜ, ಎಲ್‌ರಾಯ್ ಕ್ರಾಸ್ತಾ, ಡಾ. ಫ್ರೀಡಾ ಡಿಸೋಜ, ಸುಶಾಂತ್ ಸಲ್ದಾನ, ಆಲ್ವಿನ್ ಪಿ. ಮೊಂತೆರೊ, ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿಕ್ರೂಜ್, ಡಾ.ಜೆರಾಲ್ಡ್ ಪಿಂಟೊ ಉಪಸ್ಥಿತರಿದ್ದರು.
ಪ್ರಧಾನ ವ್ಯವಸ್ಥಾಪಕ ಸುನೀಲ್ ಮಿನೇಜಸ್ ವಂದಿಸಿದರು. ಉಳ್ಳಾಲ ಶಾಖೆಯ ಕಿರಿಯ ಸಹಾಯಕಿ ಶೈನಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.







