ತಾನೂರ್ ದೋಣಿ ದುರಂತ ಹೃದಯವಿದ್ರಾವಕ: ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಕೇರಳ ಹೈಕೋರ್ಟ್

ಕೊಚ್ಚಿ: ಎರಡು ದಿನಗಳ ಹಿಂದೆ ಮಲಪ್ಪುರಂ ಜಿಲ್ಲೆಯ ತಾನೂರ್ ಪ್ರದೇಶದಲ್ಲಿ ನಡೆದಿದ್ದ ದೋಣಿ ದುರಂತದಲ್ಲಿ 15 ಮಂದಿ ಮಕ್ಕಳೂ ಸೇರಿದಂತೆ 22 ಮಂದಿ ಮೃತಪಟ್ಟ ಘಟನೆಯನ್ನು ಆಘಾತಕಾರಿ ಹಾಗೂ ಹೃದಯವಿದ್ರಾವಕ ಎಂದು ಬಣ್ಣಿಸಿರುವ ಕೇರಳ ಹೈಕೋರ್ಟ್, ಪ್ರಾಧಿಕಾರಗಳು ಅದು ಹೇಗೆ ನಿಯಮಗಳನ್ನು ಗಾಳಿಗೆ ತೂರಿ ಅಷ್ಟು ಮಂದಿಯನ್ನು ದೋಣಿಯಲ್ಲಿ ಕೊಂಡೊಯ್ಯಲು ಅವಕಾಶ ನೀಡಿದವು ಎಂಬುದನ್ನು ಪತ್ತೆ ಹಚ್ಚಲು ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಿಕೊಂಡಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ನ್ಯಾ. ದೇವನ್ ರಾಮಚಂದ್ರನ್ ಹಾಗೂ ಶೋಭಾ ಅಣ್ಣಮ್ಮ ಅಯ್ಯಪ್ಪನ್ ಅವರನ್ನೊಳಗೊಂಡಿದ್ದ ನ್ಯಾಯಪೀಠವು, ನಿರ್ಜೀವ ಮಕ್ಕಳ ದೇಹಗಳನ್ನು ಕಂಡು ಹೃದಯ ನೆತ್ತರು ಸೂಸುತ್ತಿದೆ ಮತ್ತು ನಿದ್ರಾರಹಿತ ದಿನಗಳನ್ನು ಕಳೆದಿದ್ದೇವೆ ಎಂದು ಶೋಕ ವ್ಯಕ್ತಪಡಿಸಿದೆ.
ಉಡಾಫೆತನ, ದುರಾಸೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯ ಮಾರಣಾಂತಿಕ ಮಿಶ್ರಣದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಾಪೀಠವು, ಮತ್ತೆಂದೂ ಇಂತಹ ದುರ್ಘಟನೆ ಮರುಕಳಿಸದಂತೆ ಖಾತ್ರಿಗೊಳಿಸಲು ತಾನು ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿತು.
ತಾನೂರ್ ಪ್ರದೇಶದಲ್ಲಿ ತೂವಲ್‌ತೀರಂ ತೀರದ ಬಳಿಯ ಸಮುದ್ರದ ದಡದ ಸನಿಹ ರವಿವಾರ ರಾತ್ರಿ 7.30ರ ವೇಳೆ ದೋಣಿ ಮಗುಚಿಕೊಂಡಿತ್ತು. ಜಿಲ್ಲಾಡಳಿತದ ಪ್ರಕಾರ, 15 ಮಕ್ಕಳನ್ನು ಒಳಗೊಂಡಂತೆ ಒಟ್ಟು 22 ಪ್ರಯಾಣಿಕರು ಈ ದೋಣಿ ದುರಂತದಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟ ಮಕ್ಕಳ ಪೈಕಿ ಎಂಟು ತಿಂಗಳ ಶಿಶುವಿನಿಂದ ಹಿಡಿದು 17 ವರ್ಷದ ಹದಿಹರೆಯದ ಬಾಲಕರೂ ಸೇರಿದ್ದರು. ಅಪಘಾತಕ್ಕೀಡಾದ ದೋಣಿಯಲ್ಲಿ ಒಟ್ಟು 37 ಮಂದಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.







