ಚುನಾವಣಾ ಕಾರ್ಯಕ್ಕೆ ಬಸ್‍ಗಳು: ಕೆಎಸ್ಸಾರ್ಟಿಸಿ ಬಸ್‍ಗಳ ಕೊರತೆಯಿಂದ ಪ್ರಯಾಣಿಕರ ಪರದಾಟ

ಬೆಂಗಳೂರು, ಮೇ 9: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಳೆ(ಮೇ 10) ಮತದಾನಕ್ಕೆ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳಲು ಕೆಎಸ್ಸಾರ್ಟಿಸಿ ಬಸ್‍ಗಳ ಕೊರತೆಯಿಂದಾಗಿ ಸಾರ್ವಜನಿಕ ಪ್ರಯಾಣಿಕರು ಪರದಾಡುವಂತಾಯಿತು.
ಕೆಎಸ್ಸಾರ್ಟಿಸಿಯ ಒಟ್ಟು 8,600 ಬಸ್‍ಗಳ ಪೈಕಿ 3,700ಕ್ಕೂ ಅಧಿಕ ಬಸ್‍ಗಳನ್ನು(ಶೇ.50ರಷ್ಟು) ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಹೀಗಾಗಿ ಹೊರ ಊರುಗಳಿಗೆ ತೆರಳಲು ತೀವ್ರ ಸ್ವರೂಪದಲ್ಲಿ ಕೆಎಸ್ಸಾರ್ಟಿಸಿ ಬಸ್‍ಗಳ ಕೊರತೆ ಹಿನ್ನೆಲೆಯಲ್ಲಿ ಮಹಿಳೆಯರು, ಮಕ್ಕಳು, ವಯೋವೃದ್ಧರು ಬಸ್ ಸಿಗದೆ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಾಳೆ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ನಾಳೆಯೇ ತಮ್ಮ ಊರುಗಳಿಗೆ ತೆರಳುವುದು ಕಷ್ಟವಾಗಬಹುದು ಎನ್ನುವ ಹಿನ್ನೆಲೆಯಲ್ಲಿ ಒಂದು ದಿನ ಮುಂಚಿತವಾಗಿಯೇ ಪ್ರಯಾಣಿಕರು ಬಸ್ ಹತ್ತುತ್ತಿದ್ದಾರೆ. ಆದರೆ, ಸಾರಿಗೆ ಬಸ್‍ಗಳ ಕೊರತೆ ಹಿನ್ನೆಲೆಯಲ್ಲಿ ಪ್ರಯಾಣಿಕರು ಖಾಸಗಿ ಬಸ್‍ಗಳಲ್ಲಿ ದುಬಾರಿ ದರವನ್ನು ಕೊಟ್ಟು ತೆರಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಇಲ್ಲಿನ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದಿರುವ ಪ್ರಯಾಣಿಕರು ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಕಲಬುರಗಿ, ಹಾಸನ, ತುಮಕೂರು, ಮಂಡ್ಯ, ಮೈಸೂರು ಭಾಗಕ್ಕೆ ತೆರಳುತ್ತಿದ್ದಾರೆ. ಬಸ್‍ಗಳು ನಿಲ್ದಾಣಕ್ಕೆ ಬಂದ ಕೂಡಲೇ ಕೆಲವೇ ಕ್ಷಣದಲ್ಲಿ ಭರ್ತಿಯಾಗುತ್ತಿದ್ದು, ಹಲವರಿಗೆ ಸೀಟುಗಳು ದೊರೆಯುತ್ತಿಲ್ಲ. ಕೆಲ ಊರುಗಳಿಗೆ ತೆರಳಲು ಬಸ್ ಸಿಕ್ಕಿದರೆ, ಕೆಲವು ಭಾಗಗಳಿಗೆ ತೆರಳಲು ಜನರು ಬಸ್‍ಗಾಗಿ ಕಾದು ಕುಳಿತಿದ್ದ ದೃಶ್ಯ ಕಂಡುಬಂತು.







