ಕೇಂದ್ರ ಗೃಹ ಸಚಿವರು ಎಚ್ಚರಿಕೆಯಿಂದ ಹೇಳಿಕೆ ನೀಡಲಿ: ಸಿದ್ದರಾಮಯ್ಯ
ಮುಸ್ಲಿಮ್ ಮೀಸಲಾತಿ ರದ್ದು ವಿಚಾರ

ಬೆಂಗಳೂರು, ಮೇ 9: ‘ರಾಜ್ಯ ಬಿಜೆಪಿ ಸರಕಾರ ಮುಸ್ಲಿಮ್ ಸಮುದಾಯದ ಮೀಸಲಾತಿಯನ್ನು ರದ್ದುಗೊಳಿಸಿ ಆ ಪಾಲನ್ನು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚಿಕೊಟ್ಟಿರುವುದು ಪರಸ್ಪರ ವೈರತ್ವ-ದ್ವೇಷ ಬೆಳೆಸುವ ದುರುದ್ದೇಶದಿಂದ ಹೊರತು ಇದಕ್ಕೆ ಯಾವ ಸದುದ್ದೇಶವೂ ಇಲ್ಲ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಸಾಲಿಸಿಟರ್ ಜನರಲ್ ಇಲ್ಲವೇ ವಕೀಲರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಿ, ಮೂರನೇ ವ್ಯಕ್ತಿ ಇದಕ್ಕೆ ಯಾಕೆ ಪ್ರತಿಕ್ರಿಯಿಸಬೇಕು’ ಎಂದು ನ್ಯಾ.ನಾಗರತ್ನ ಕೇಳಿದ್ದಾರೆ. ಕೇಂದ್ರ ಗೃಹ ಸಚಿವರು ಇನ್ನು ಮುಂದೆಯಾದರೂ ಎಚ್ಚರಿಕೆಯಿಂದ ಹೇಳಿಕೆ ನೀಡುತ್ತಾರೆ ಎಂದು ಭಾವಿಸಿದ್ದೇನೆ’ ಎಂದು ತಿಳಿಸಿದ್ದಾರೆ.
‘ಬಿಜೆಪಿ ಸರಕಾರದ ಮುಸ್ಲಿಮ್ ಸಮುದಾಯದ ಮೀಸಲಾತಿ ರದ್ದತಿ ಆದೇಶದ ಬಗ್ಗೆ ನೀಡಿರುವ ಬೇಜವಾಬ್ದಾರಿ ಹೇಳಿಕೆಗಾಗಿ ಸುಪ್ರೀಂ ಕೋರ್ಟ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಪರಾಕಿ ನೀಡಿದೆ. ‘ಪ್ರಕರಣ ವಿಚಾರಣೆಯಲ್ಲಿರುವಾಗ ನ್ಯಾಯಾಲಯದ ಪಾವಿತ್ರ್ಯತೆಯನ್ನು ಪಾಲಿಸಬೇಕಾಗುತ್ತದೆ, ಈ ರೀತಿಯ ರಾಜಕೀಯ ಹೇಳಿಕೆ ಸಲ್ಲದು’ ಎಂದು ನ್ಯಾ.ಬಿ.ವಿ.ನಾಗರತ್ನ ಹೇಳಿರುವುದು ಸರಿಯಾಗಿದೆ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.





