ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದಲ್ಲಿ ಮಸ್ಟರಿಂಗ್
ಗಮನ ಸೆಳೆಯುತ್ತಿರುವ ಸಖೀ ಮತಗಟ್ಟೆ

ಉಡುಪಿ, ಮೇ 9: ವಿಧಾನಸಭಾ ಚುನಾವಣೆ ಹಿನ್ನೆಯೆಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಲಾದ ಮಸ್ಟರಿಂಗ್ ಕೇಂದ್ರಗಳಲ್ಲಿ ಇಂದು ಮಸ್ಟರಿಂಗ್ ಪ್ರಕ್ರಿಯೆ ನಡೆಯಿತು.
ಬೈಂದೂರು ಕ್ಷೇತ್ರದ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರ ಕ್ಷೇತ್ರದ ಕುಂದಾಪುರ ಭಂಡಾರ್‌ಕಾರ್ಸ್ ಸಾಯನ್ಸ್ ಆ್ಯಂಡ್ ಆರ್ಟ್ಸ್ ಕಾಲೇಜು, ಉಡುಪಿ ಕ್ಷೇತ್ರದ ಬ್ರಹ್ಮಗಿರಿ ಸೈಂಟ್ ಸಿಸಿಲೀಸ್ ಶಾಲೆ, ಕಾಪು ಕ್ಷೇತ್ರದ ಉಳಿಯಾರಗೋಳಿ ದಂಡತೀರ್ಥ ಪಿಯು ಕಾಲೇಜು ಹಾಗೂ ಕಾರ್ಕಳ ಕ್ಷೇತ್ರದ ಕಾರ್ಕಳ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮಸ್ಟರಿಂಗ್ ಕೇಂದ್ರಗಳಿಂದ ಮತಗಟ್ಟೆ ಅಧಿಕಾರಿಗಳು ತಮ್ಮ ತಂಡದೊಂದಿಗೆ ಮತಗಟ್ಟೆಗಳಿಗೆ ತೆರಳಿದರು.
ಮತಗಟ್ಟೆ ಅಧಿಕಾರಿಗಳು ಪೊಲೀಸ್ ಭದ್ರತೆ ಜೊತೆ ಮತಯಂತ್ರಗಳೊಂದಿಗೆ ತಮಗೆ ಸೂಚಿಸಿದ ಮಾರ್ಗಗಳ ಬಸ್‌ಗಳಲ್ಲಿ ಮತಗಟ್ಟೆಗಳಿಗೆ ತೆರಳಿದರು. ಆಯಾ ಕ್ಷೇತ್ರದ ತಾಲೂಕು ಚುನಾವಣಾಧಿಕಾರಿಗಳು ಮಸ್ಟರಿಂಗ್ ಕಾರ್ಯದ ನೇತೃತ್ವ ವನ್ನು ವಹಿಸಿದ್ದರು.
ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಹಾಗೂ ಎಸ್ಪಿ ಅಕ್ಷಯ್ ಹಾಕೇ ಮಚ್ಚೀಂದ್ರ ಉಡುಪಿ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಜಿಲ್ಲಾಧಿಕಾರಿಗಳು ಬೈಂದೂರು, ಕುಂದಾಪುರ, ಕಾಪು ಕೇಂದ್ರ ಗಳಿಗೂ ತೆರಳಿ ಮಸ್ಟರಿಂಗ್ ಪ್ರಕ್ರಿಯೆಯನ್ನು ಪರಿಶೀಲಿಸಿದರು.
ಗಮನ ಸೆಳೆಯುತ್ತಿರುವ ಸಖೀ ಮತಗಟ್ಟೆ
ಜಿಲ್ಲೆಯ ಪ್ರತಿ ಕ್ಷೇತ್ರಕ್ಕೆ ಐದರಂತೆ ಸ್ಥಾಪಿಸಲಾಗಿರುವ ಒಟ್ಟು 25 ಸಖೀ ಮತಗಟ್ಟೆಗಳನ್ನು ವೈಭವಯುತವಾಗಿ ಶೃಂಗರಿಸಲಾಗಿದ್ದು, ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.
ಮಹಿಳಾ ಮತಗಟ್ಟೆ ಅಧಿಕಾರಿಗಳಿಂದ ನಡೆಸುವ ಈ ಸಖೀ ಮತಟ್ಟೆಗಳನ್ನು ಬಣ್ಣಬಣ್ಣರ ಸೀರೆಗಳನ್ನು ಪೋಣಿಸಿ, ಹೂವುಗಳನ್ನು ಜೋಡಿಸಿ ಅಲಂಕರಿಸ ಲಾಗಿದೆ. ಉಡುಪಿ ಕ್ಷೇತ್ರದ ಸಖೀ ಮತಗಟ್ಟೆಯಲ್ಲಿ ಒಂದಾಗಿರುವ ಉಡುಪಿ ನಗರದ ವಳಕಾಡು ಶಾಲೆಯ ಮತಗಟ್ಟೆಯು ಇದೀಗ ಸಾಕಷ್ಟು ಗಮನ ಸೆಳೆ ಯುತ್ತಿದೆ.
