ಸಾಮರಸ್ಯ, ಅಭಿವೃದ್ಧಿಗೆ ಪೂರಕವಾಗಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡಿ: ಸಾಲಿಡಾರಿಟಿ ಯೂತ್ ಮೂವ್ಮೆಂಟ್

ಉಡುಪಿ, ಮೇ 9: ಕರ್ನಾಟಕ ವಿಧಾನಸಭಾ ಚುನಾವಣೆಯು ಮೇ 10 ರಂದು ನಡೆಯಲಿದ್ದು ಎಲ್ಲರೂ ತಪ್ಪದೇ ಮತದಾನ ಮಾಡುವ ಮುಖಾಂತರ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಸಾಲಿಡಾರಿಟಿ ಯೂತ್ ಮೂವ್ಮೆಂಟ್, ಉಡುಪಿ ಜಿಲ್ಲೆ ಮತದಾರರಲ್ಲಿ ವಿನಂತಿಸಿದೆ.
ಯುವಕರು ವಿಶೇಷ ಕಾಳಜಿಯಿಂದ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸ ಬೇಕಾಗಿದೆ. ಜಿಲ್ಲೆಯ ಅಭಿವೃದ್ಧಿಗೆ, ಸಾಮರಸ್ಯಕ್ಕೆ ಪೂರಕವಾಗಿರುವ ಅಭ್ಯರ್ಥಿ ಯನ್ನು ಗೆಲ್ಲಿಸುವತ್ತ ಗಮನಹರಿಸಬೇಕು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಅಭ್ಯರ್ಥಿಗಳ ಬದಲಿಗೆ ಜಿಲ್ಲೆಯ ಅಭಿವೃದ್ಧಿ ಕುರಿತಾದ ದೂರದೃಷ್ಟಿ, ಸರ್ವರನ್ನು ಒಳಗೊಳ್ಳುವ ತುಡಿತ ಇರುವ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಅವರು ಹೇಳಿದ್ದಾರೆ.
ಚುನಾವಣೆಯ ಕೊನೆಯ ಹಂತದಲ್ಲಿ ರಾಜಕೀಯ ಪಕ್ಷಗಳು ಹಣ, ಹೆಂಡ ಅಥವಾ ಇನ್ನಿತರ ಅಮಿಷವೊಡ್ಡಿ ನಿಮ್ಮ ಮತ ಸೆಳೆಯಲು ಪ್ರಯತ್ನಿಸುತ್ತಾರೆ. ಈಗ ನಿಮಗೆ ಅಮಿಷವೊಡ್ಡುವ ಅಭ್ಯರ್ಥಿಗಳು ಮುಂದಿನ ಐದು ವರ್ಷ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ನಿಮ್ಮ ಜೊತೆ ಇರುವುದಿಲ್ಲ. ಕ್ಷಣಿಕ ಅಮಿಷಗಳಿಗೆ ಬಲಿಯಾಗದೆ ಈ ರಾಜ್ಯದ ಹಿತದೃಷ್ಟಿಯಿಂದ ಅತ್ಯುತ್ತಮ ಸರಕಾರ ರಚನೆ ಯಾಗುವಂತೆ ಮತ ಚಲಾಯಿಸಬೇಕಾಗಿದೆ. ಶಾಸಕತ್ವವನ್ನು ಅಧಿಕಾರ ಎನ್ನುವುದ ಕ್ಕಿಂತ ಹೊಣೆಗಾರಿಕೆಯೆಂದು ಭಾವಿಸುವ ಸೂಕ್ತ ಅಭ್ಯರ್ಥಿಗೆ ನಿಮ್ಮ ಮತ ನೀಡಿ ಎಂದು ಸಾಲಿಡಾರಿಟಿ ಉಡುಪಿ ಆಗ್ರಹಿಸಿದೆ.