ನೀರಿನಲ್ಲಿರುವ ಕಬ್ಬಿಣದ ಅಂಶವನ್ನು ಕಡಿಮೆಗೊಳಿಸುವ ಯೋಜನೆ ಅಭಿವೃದ್ಧಿ

ಶಿರ್ವ: ಬಂಟಕಲ್ಲು ಮಧ್ವ ವಾದಿರಾಜತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಿ.ಐ.ಎಸ್. ಇಂಟರ್ಪೋ ಲೇಷನ್ ಬಳಸಿ ನೀರಿನಲ್ಲಿರುವ ಕಬ್ಬಿಣದ ಅಂಶ ಕಡಿಮೆಗೊಳಿಸುವ ಯೋಜನೆಯನ್ನು ಅಭಿವೃದ್ಧಿಪಡಿಸಿದ್ದಾರೆ.
ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ದೀಪಿಕಾ ಬಿ.ವಿ. ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಆದರ್ಶ, ಆದಿತ್ಯ ಕೃಷ್ಣ ಭಟ್ ಮತ್ತು ಪ್ರಿಯಾಂಕ ಡಿಸೋಜ ಈ ಯೋಜನೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಇಂಟ ರ್ಪೋಲೇಷನ್ ಬಳಸಿ ನೀರಿನಲ್ಲಿರುವ ಕಬ್ಬಿಣದ ಅಂಶವನ್ನು ಕಡಿಮೆಗೊಳಿಸು ವುದು ಮತ್ತು ನೀರನ್ನು ಫಿಲ್ಟರ್ ಮಾಡಿ ಶುದ್ಧಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ಯೋಜನೆಯ ಅಧ್ಯಯನಕ್ಕೆ ಉಡುಪಿ ತಾಲೂಕಿನ 50 ವಿವಿಧ ಭಾಗದ ಬಾವಿಯ ನೀರಿನಲ್ಲಿರುವ ಕಬ್ಬಿಣದ ಅಂಶವನ್ನು ಪ್ರಯೋಗಾಲಯದಲ್ಲಿ ಪರಿಶೀಲಿಸಲಾಯಿತು. ಇದರ ಫಲಿತಾಂಶದ ಅನುಸಾರ ಜಿಐಎಸ್ ಇಂಟ ರ್ಪೋಲೇಷನ್ ತಂತ್ರಜ್ಞಾನವನ್ನು ಬಳಸಿಕೊಂಡು ಕಬ್ಬಿಣದ ಅಂಶವನ್ನು ಇಡೀ ತಾಲೂಕಿಗೆ ಪ್ರಾದೇಶಿಕ ವಿತರಣೆ ಮಾಡಲಾಗಿದೆ. ಇದರಿಂದ ರಚಿಸಲಾದ ನಕ್ಷೆಯಿಂದ ನೀರಿನಲ್ಲಿರುವ ಕಬ್ಬಿಣ ಅಂಶವನ್ನು ಮೂರು ವಿಭಾಗವಾಗಿ ವಿಂಗಡಿಸಲಾಗಿದೆ.
ಇದರಿಂದ ಹೆಚ್ಚು ನೀರಿನಲ್ಲಿ ಕಬ್ಬಿಣದ ಅಂಶವಿರುವ ಜಾಗವನ್ನು ಕಂಡು ಹಿಡಿಯಲಾಗಿದೆ. ಆ ಜಾಗದ ನೀರಿನ ಮಾದರಿಯನ್ನು ತಂದು ಭತ್ತದ ಹೊಟ್ಟಿನ ಬೂದಿಯಿಂದ ಶೋಧಿಸಲಾಗಿದೆ. ಇದರಿಂದ ಕಬ್ಬಿಣದ ಪ್ರಮಾಣ ಬಿಡಿಎಸ್ ಪ್ರಮಾಣಿತ ಅನುಮತಿಸುವ ಮಿತಿಗಿಂತ ಕಡಿಮೆಯಾಗಿ ನೀರು ಕುಡಿಯಲು ಯೋಗ್ಯವಾಗುತ್ತದೆ. ಜಿಐಎಸ್ ತಂತ್ರಜ್ಞಾನದಿಂದ ತಯಾರಿಸಿದ ನಕ್ಷೆ ಚಿಕಿತ್ಸೆಯ ನಿರ್ಧಾರ ತೆಗೆದುಕೊಳ್ಳಲು ಮತ್ತು ಮಲಿನ ಪ್ರದೇಶವನ್ನು ಕಡಿಮೆ ಸಮಯದಲ್ಲಿ ಕಂಡು ಹಿಡಿಯಲು ಅನುಕೂಲವಾಗಿದೆ.