ಮುರುಡೇಶ್ವರ - ಯಶವಂತಪುರ ನಡುವೆ ಬೇಸಿಗೆ ವಿಶೇಷ ರೈಲು ಸಂಚಾರ

ಉಡುಪಿ, ಮೇ 9: ನೈರುತ್ಯ ರೈಲ್ವೆಯ ಸಹಯೋಗದೊಂದಿಗೆ ಕೊಂಕಣ ರೈಲ್ವೆಯು ಯಶವಂತಪುರ (ಬೆಂಗಳೂರು) ಹಾಗೂ ಮುರುಡೇಶ್ವರ ನಡುವೆ ಬೇಸಿಗೆ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಿದೆ.
ರೈಲು ನಂ.06587 ಯಶವಂತಪುರ-ಮುರುಡೇಶ್ವರ ಬೇಸಿಗೆ ವಿಶೇಷ ರೈಲು ಇಂದು ಮಧ್ಯರಾತ್ರಿ 11:55ಕ್ಕೆ ಯಶವಂತಪುರದಿಂದ ನಿರ್ಗಮಿಸಲಿದ್ದು, ನಾಳೆ ಅಪರಾಹ್ನ 12:55ಕ್ಕೆ ಮುರುಡೇಶ್ವರ ತಲುಪಲಿದೆ. ಅದೇ ರೀತಿ ರೈಲು ನಂ.06588 ಮುರುಡೇಶ್ವರ- ಯಶವಂತಪುರ ರೈಲು ಮೇ 10ರಂದು ಅಪರಾಹ್ನ 1:30ಕ್ಕೆ ಮುರುಡೇಶ್ವರದಿಂದ ಪ್ರಯಾಣ ಬೆಳೆಸಲಿದ್ದು, ಮರುದಿನ ಬೆಳಗಿನ ಜಾವ 4 ಗಂಟೆಗೆ ಯಶವಂತಪುರ ತಲುಪಲಿದೆ.
ಈ ರೈಲಿಗೆ ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚೆನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು ಹಾಗೂ ಭಟ್ಕಳಗಳಲ್ಲಿ ನಿಲುಗಡೆ ಇರುತ್ತದೆ. ರೈಲು ಒಟ್ಟು 2 ತ್ರಿಟಯರ್ ಎಸಿ ಸೇರಿದಂತೆ ಒಟ್ಟು 14 ಕೋಚ್‌ಗಳನ್ನು ಹೊಂದಿರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಇಂದೋರ್-ಮಂಗಳೂರು ಜಂಕ್ಷನ್: ಇದೇ ರೀತಿ ಇಂದೋರ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಏಕಮಾರ್ಗ ಸ್ಪೆಷಲ್ ರೈಲನ್ನು ಪಶ್ಚಿಮ ರೈಲ್ವೆಯ ಸಹಯೋಗದೊಂದಿಗೆ ಓಡಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.
ರೈಲು ನಂ.09302 ಇಂದೋರ್- ಮಂಗಳೂರು ಜಂಕ್ಷನ್ ಓನ್‌ವೇ ವಿಶೇಷ ರೈಲು ಮೇ 11ರ ಗುರುವಾರ ಬೆಳಗ್ಗೆ 11:15ಕ್ಕೆ ಇಂದೋರ್‌ನಿಂದ ನಿರ್ಗಮಿಸಲಿದ್ದು, ಶುಕ್ರವಾರ ಸಂಜೆ 4:15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ಈ ರೈಲಿಗೆ ದಿವಾಸ್, ಉಜ್ಜೈನಿ ಜಂಕ್ಷನ್, ನಾಗ್ಡ ಜಂಕ್ಷನ್, ಸೂರತ್, ವಲ್ಸಾಡ್,ವಾಪಿ, ಪಾಲ್ಗಾರ್, ವಾಸೈ ರೋಡ್, ಪನ್ವೇಲ್, ರೋಹಾ, ರತ್ನಗಿರಿ, ರಾಯಪುರ ರೋಡ್, ಕುಡಾಲ, ಥೀವಿಂ ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾರವಾರ ಹಾಗೂ ಉಡುಪಿ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಈ ರೈಲು ಒಟ್ಟು 21 ಕೋಚ್‌ಗಳನ್ನು ಹೊಂದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು ಸಿಟಿ-ಕಾರವಾರ ರೈಲಿಗೆ ಹೆಚ್ಚುವರಿ ಬೋಗಿ: ಕೆಎಸ್‌ಆರ್ ಬೆಂಗಳೂರು ಸಿಟಿ ಹಾಗೂ ಕಾರವಾರ ನಡುವೆ ಸಂಚರಿಸುವ ದೈನಂದಿನ ಎಕ್ಸ್‌ಪ್ರೆಸ್ ರೈಲು ಇಂದು ಮತ್ತು ನಾಳೆ ಒಂದು ಹೆಚ್ಚುವರಿ ಸ್ಲೀಪರ್ ಕೋಚ್ ನೊಂದಿಗೆ ಸಂಚರಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.







