ಅಕ್ರಮ ಗನ್ ತಯಾರಿಕೆ ಪ್ರಕರಣ: ಆರೋಪಿಗೆ ಹೈಕೋರ್ಟ್ ನಿಂದ ಜಾಮೀನು

ಬೆಂಗಳೂರು, ಮೇ 9: ಅಕ್ರಮವಾಗಿ ಗನ್‍ಗಳನ್ನು ಸಿದ್ಧಪಡಿಸಿ ಮಾರಾಟ ಮಾಡಿದ ಹಾಗೂ ಸ್ಫೋಟಕಗಳನ್ನು ಸಂಗ್ರಹಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿಯೊಬ್ಬರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಈ ಕುರಿತು ತುಮಕೂರು ಜಿಲ್ಲೆಯ ದುರ್ಗದಹಳ್ಳಿಯ ಕೃಷ್ಣಪ್ಪ ಎಂಬುವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಆರೋಪಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಅಲ್ಲದೆ, ವೃತ್ತಿಯಲ್ಲಿ ಕಾಪೆರ್ಂಟರ್ ಆಗಿರುವ ಅರ್ಜಿದಾರನ ವಿರುದ್ಧ ಸಿಂಗಲ್ ಬ್ಯಾರೆಲ್ ಗನ್‍ಗಳನ್ನು ತಯಾರಿಸಿ, ಪರವಾನಗಿ ಹೊಂದಿರದ ವ್ಯಕ್ತಿಗಳಿಗೆ(ಪ್ರಕರಣದ ಇತರ ಆರೋಪಿಗಳು) ಮಾರಾಟ ಮಾಡಿದ ಆರೋಪವಿದೆ. ಆತನಿಂದ ಕೆಲವು ಗನ್‍ಗಳು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಕೃಷ್ಣಪ್ಪ ಕಳೆದ 1 ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಪ್ರಕರಣದ ತನಿಖೆ ಈಗಾಗಲೇ ಪೂರ್ಣಗೊಂಡಿದ್ದು ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ. ವಿಚಾರಣಾ ನ್ಯಾಯಾಲಯದ ವಿಚಾರಣೆಗಾಗಿ ಅರ್ಜಿದಾರನನ್ನು ಬಂಧಿಸಿಟ್ಟುಕೊಳ್ಳುವ ಅವಶ್ಯಕತೆ ಕಂಡುಬರುತ್ತಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣವೇನು?: ಅರ್ಜಿದಾರ ಹಾಗೂ ಮತ್ತೊಬ್ಬ ವ್ಯಕ್ತಿ ಗನ್‍ಗಳ ತಯಾರಿಕೆ, ಮಾರಾಟ ಹಾಗೂ ಸ್ಫೋಟಕ ವಸ್ತುಗಳ ಸಂಗ್ರಹದಂತಹ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಆಧಾರದಲ್ಲಿ 2022ರ ಜ.12ರಂದು ಅರ್ಜಿದಾರನ ಮನೆಯ ಮೇಲೆ ಕ್ಯಾತಸಂದ್ರ ಠಾಣೆಯ ಪೆÇಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪರವಾನಗಿ ಇಲ್ಲದ ಗನ್‍ಗಳು ಹಾಗೂ ಸ್ಫೋಟಕಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಆರೋಪಿ ತಯಾರಿಸಿದ್ದ ಗನ್‍ಗಳನ್ನು ಪ್ರಕರಣದ 2 ರಿಂದ 9 ನೆ ಆರೋಪಿಗಳಿಗೆ ಮಾರಾಟ ಮಾಡಿದ್ದ ಹಿನ್ನೆಲೆಯಲ್ಲಿ ಅದೇ ದಿನ ಎಲ್ಲ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದರು. ಪ್ರಕರಣದ ಇತರ ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಿದ್ದರಾದರೂ, ಮೊದಲ ಆರೋಪಿ ಕೃಷ್ಣಪ್ಪಗೆ ಜಾಮೀನು ದೊರೆತಿರಲಿಲ್ಲ. ಇದರಿಂದ, ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿ, ಈಗಾಗಲೇ ತನಿಖೆ ಪೂರ್ಣಗೊಂಡು ದೋಷಾರೋಪ ಪಟ್ಟಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದರು.







