ಎಸೆಸೆಲ್ಸಿ ಪರೀಕ್ಷೆ: ಕೋಟದ ಕೇಶವ ಉಪಾಧ್ಯ ಕನ್ನಡ ಮಾಧ್ಯಮದಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ

ಉಡುಪಿ, ಮೇ 9: ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿ ಕೇಶವ ಉಪಾಧ್ಯ 621 ಅಂಕ ಗಳಿಸುವ ಮೂಲಕ ಸೋಮವಾರ ಪ್ರಕಟಗೊಂಡ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಮೂಡಿಬಂದಿದ್ದಾರೆ.
ಉಡುಪಿ ಜಿಲ್ಲೆಯ ಮಟ್ಟಿಗೆ ಕನ್ನಡ ಮಾಧ್ಯಮದಲ್ಲಿ ಉತ್ತರ ಬರೆದು ಮೊದಲ ಹತ್ತು ಸ್ಥಾನ ಪಡೆದ ಎಲ್ಲಾ ವಿದ್ಯಾರ್ಥಿ ಗಳು ಗ್ರಾಮೀಣ ಪ್ರದೇಶದವರಾಗಿರುವುದು ಈ ಬಾರಿಯ ವಿಶೇಷವೆನಿಸಿದೆ.
ಉಡುಪಿ ತಾಲೂಕಿನ ಕೋಡಿಕನ್ಯಾಣದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಹನಾ ಹಾಗೂ ಕುಂದಾಪುರ ತಾಲೂಕು ಸಿದ್ಧಾಪುರದ ಸರಕಾರಿ ಪ್ರೌಢ ಶಾಲೆಯ ಶೋಭಿತ್ ತಲಾ 618 ಅಂಕಗಳನ್ನು ಗಳಿಸುವ ಮೂಲಕ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.
ಕಾರ್ಕಳ ತಾಲೂಕು ದುರ್ಗಾ ತೆಳ್ಳಾರು ಶ್ರೀ ಬಿ.ಎಂ.ಪಿ.ಎಂ. ಸರಕಾರಿ ಪ್ರೌಢ ಶಾಲೆಯ ಶ್ರಿಯಾ ಅವರು 617 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದರೆ, 616 ಅಂಕಗಳನ್ನು ಇಬ್ಬರು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.
ಕುಂದಾಪುರ ತಾಲೂಕು ಅರೆಶಿರೂರಿನ ಶ್ರೀಮೂಕಾಂಬಿಕಾ ಟೆಂಪಲ್ ಹೈಸ್ಕೂಲ್‌ನ ಶಾನ್ವಿ ಹಾಗೂ ಉಡುಪಿ ತಾಲೂಕು ಮೂಡುಬೆಳ್ಳೆಯ ಸೈಂಟ್ ಲಾರೆನ್ಸ್ ಜೂನಿಯರ್ ಕಾಲೇಜಿನ ತನಿಶಾ ಶೆಟ್ಟಿ ತಲಾ 616 ಅಂಕ ಪಡೆದಿದ್ದಾರೆ.
ಕುಂದಾಪುರ ತಾಲೂಕು ಕೊಡ್ಲಾಡಿಯ ಶ್ರೀಮೂಕಾಂಬಿಕಾ ಟೆಂಪಲ್ ಹೈಸ್ಕೂಲ್‌ನ ಶಶಾಂಕ ಹಾಗೂ ಉಡುಪಿ ತಾಲೂಕು ಆವರ್ಸೆಯ ಸರಕಾರಿ ಪ್ರೌಢ ಶಾಲೆಯ ಧರಿತ್ರಿ ಕಾಮತ್ ಅವರು ತಲಾ 615 ಅಂಕಗಳನ್ನು ಪಡೆದಿದ್ದಾರೆ. ಕಾರ್ಕಳ ತಾಲೂಕು ಕಾಡಬೆಟ್ಟು ಸರಕಾರಿ ಪ್ರೌಢ ಶಾಲೆಯ ರಶ್ಮಿ ಅವರು 614 ಅಂಕವನ್ನೂ, ಕಾರ್ಕಳ ತಾಲೂಕು ಪಳ್ಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಶ್ರೀರಕ್ಷಾ ಬಿ.ನಾಯಕ್ 613 ಅಂಕಗಳನ್ನು ಪಡೆದಿದ್ದಾರೆ.
ಆಂಗ್ಲ ಮಾಧ್ಯಮದಲ್ಲಿ: ಉಡುಪಿ ಜಿಲ್ಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಕುಂದಾಪುರದ ಶ್ರೀವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶ್ರೀಲಹರಿ 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಮೂವರು ವಿದ್ಯಾರ್ಥಿಗಳು 623 ಅಂಕಗಳಿಸಿದ್ದು, ಜಿಲ್ಲೆಗೆ ದ್ವಿತೀಯ ಹಾಗೂ ರಾಜ್ಯಕ್ಕೆ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.
ಬೈಂದೂರು ತಾಲೂಕು ಉಪ್ಪುಂದ ಸರಕಾರಿ ಜೂನಿಯರ್ ಕಾಲೇಜಿನ ಅಮೂಲ್ಯ ಹಾಗೂ ಅದೇ ತಾಲೂಕಿನ ಚಿತ್ತೂರು ಸರಕಾರಿ ಪ್ರೌಢ ಶಾಲೆಯ ಚೈತನ್ಯ ಅವರು ಕಾರ್ಕಳ ತಾಲೂಕು ಕ್ರೈಸ್ತಕಿಂಗ್ ಆಂಗ್ಲ ಮಾಧ್ಯಮ ಪದವಿ ಪೂರ್ವ ಕಾಲೇಜಿನ ಅನಂತ ಎನ್.ಕೆ. ಅವರು ತಲಾ 623 ಅಂಕಗಳನ್ನು ಪಡೆದಿದ್ದಾರೆ.
622 ಅಂಕಗಳನ್ನು ಮೂವರು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಕುಂದಾಪುರ ಶ್ರೀವೆಂಕಟರಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸಾತ್ವಿಕ್ ಆರ್., ಅದೇ ಶಾಲೆಯ ಸುಮಿತ್ರಾ ಭಟ್ ಹಾಗೂ ಕಾರ್ಕಳ ತಾಲೂಕು ಕುಕ್ಕುಜೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಧನ್ಯಾ ನಾಯ್ಕ್ ಅವರೇ 622 ಅಂಕ ಪಡೆದ ಜಿಲ್ಲೆಯ ವಿದ್ಯಾರ್ಥಿಗಳು.
ಕಾರ್ಕಳ ಕ್ರೈಸ್ಟ್‌ಕಿಂಗ್ ಆಂಗ್ಲ ಮಾಧ್ಯಮ ಪದವಿ ಪೂರ್ವ ಕಾಲೇಜಿನ ಅನಘಾ ವಿ., ಉಡುಪಿಯ ಸೈಂಟ್ ಸಿಸಿಲೀಸ್ ಪ್ರೌಢ ಶಾಲೆಯ ವೈಷ್ಣವಿ ವಿನಾಯಕ ಕಾಡವಾಡ ಹಾಗೂ ಉಡುಪಿ ತಾಲೂಕು ಅಲೆವೂರು ಶಾಂತಿನಿಕೇತ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ರಮ್ಯ ಕೆ. ಅವರು ತಲಾ 621 ಅಂಕಗಳನ್ನು ಪಡೆದಿದ್ದಾರೆ.
ಇನ್ನು 620 ಅಂಕಗಳನ್ನು ಐದು ಮಂದಿ ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಬೈಂದೂರು ಸರಕಾರಿ ಜೂನಿಯರ್ ಕಾಲೇಜಿನ ಚೈತ್ರ, ಶಂಕರನಾರಾಯಣ ಮದರ್ ತೆರೆಸಾ ಸ್ಮಾರಕ ಶಾಲೆಯ ಅಕ್ಷಿತಾ, ಬಸರೂರು ಸರಕಾರಿ ಪ್ರೌಢ ಶಾಲೆಯ ಶೃದ್ಧಾ ಎಸ್.ಮೊಗವೀರ, ಮುನಿಯಾಲು ಕರ್ನಾಟಕ ಪಬ್ಲಿಕ್ ಶಾಲೆಯ ಅಮೂಲ್ಯ ಹಾಗೂ ಕುಕ್ಕುಜೆ ವಿವೇಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶಾರ್ವರಿ ಅವರು ತಲಾ 620 ಅಂಕಗಳನ್ನು ಪಡೆದಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 47 ಶಾಲೆಗಳು ಶೇ.100 ಫಲಿತಾಂಶವನ್ನು ದಾಖಲಿಸಿವೆ. ಇವುಗಳಲ್ಲಿ ಕಾರ್ಕಳ ವಲಯದ 12, ಉಡುಪಿ ಮತ್ತು ಕುಂದಾಪುರ ವಲಯದ ತಲಾ 11, ಬ್ರಹ್ಮಾವರ ವಲಯದ ಎಂಟು ಹಾಗೂ ಬೈಂದೂರು ವಲಯದಲ್ಲಿ ಐದು ಶಾಲೆಗಳಿವೆ.
ಬೈಂದೂರು ವಲಯದಲ್ಲಿ 1 ಸರಕಾರಿ, 4 ಖಾಸಗಿ, ಕುಂದಾಪುರದಲ್ಲಿ 4 ಸರಕಾರಿ, 1 ಅನುದಾನಿತ, 6 ಖಾಸಗಿ, ಕಾರ್ಕಳ ವಲಯದಲ್ಲಿ 3 ಸರಕಾರಿ, 2ಅನುದಾನಿತ, 7 ಖಾಸಗಿ, ಬ್ರಹ್ಮಾವರದಲ್ಲಿ 3 ಸರಕಾರಿ, 3 ಅನುದಾನಿತ, 2 ಖಾಸಗಿ ಶಾಲೆಗಳು, ಉಡುಪಿ ವಲಯದಲ್ಲಿ 1 ಸರಕಾರಿ, 1 ಅನುದಾನಿತ ಹಾಗೂ 9 ಖಾಸಗಿ ಶಾಲೆಗಳು ತಲಾ ಶೇ.100 ಫಲಿತಾಂಶ ದಾಖಲಿಸಿವೆ ಎಂದು ಡಿಡಿಪಿಐ ಅವರು ಮಾಹಿತಿ ನೀಡಿದ್ದಾರೆ.