ಪಕ್ಷದಲ್ಲಿ ನಾನು ಬೆಳೆಸಿದ ವ್ಯಕ್ತಿಗಳು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ: ಶರದ್ ಪವಾರ್
ಉತ್ತರಾಧಿಕಾರಿಯನ್ನು ರೂಪಿಸುವಲ್ಲಿ ತಾನು ವಿಫಲನಾಗಿದ್ದೇನೆಂಬ ‘ಸಾಮ್ನಾ’ದ ಟೀಕೆಗೆ ಎನ್ಸಿಪಿ ವರಿಷ್ಠನ ಪ್ರತಿಕ್ರಿಯೆ

ಮುಂಬೈ, ಮೇ 9: ಎನ್ಸಿಪಿಯನ್ನು ಮುನ್ನಡೆಸಬಲ್ಲಂತಹ ಉತ್ತರಾಧಿಕಾರಿಯೊಬ್ಬರನ್ನು ರೂಪಿಸುವಲ್ಲಿ ತಾನು ವಿಫಲನಾಗಿದ್ದೇನೆಂದು ಶಿವಸೇನೆ (ಉದ್ದವ್ ಬಣ)ಯ ಮುಖವಾಣಿ ಸಾಮ್ನಾದಲ್ಲಿ ಪ್ರಕಟವಾದ ಸಂಪಾದಕೀಯಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಶರದ್ಪವಾರ್, ತನ್ನ ಬಗ್ಗೆ ಬೇರೆಯವರು ಏನು ಬರೆದಿದ್ದಾರೆಂಬ ಬಗ್ಗೆ ತಾನು ತಲೆಕೆಡಿಸಿಕೊಳ್ಳುವುದಿಲ್ಲವೆಂದು ಹೇಳಿದ್ದಾರೆ. ಪಕ್ಷದಲ್ಲಿ ತಾನು ಬೆಳೆಸಿದ ವ್ಯಕ್ತಿಗಳು ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆಂದು ಅವರು ಹೇಳಿದ್ದಾರೆ.
ಸತಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು ‘‘ ನಮ್ಮ ಪಕ್ಷದ ಸಹದ್ಯೋಗಿಗಳು ತಮ್ಮದೇ ಆದ ಅಭಿಪ್ರಾಯಗಳನ್ನು ಮುಂದಿಡುತ್ತಾರೆ. ಆದರೆ ನಾವು ಅಂತಹ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದಿಲ್ಲ. ಪಕ್ಷವನ್ನು ಹೇಗೆ ಮುನ್ನಡೆಸಬೇಕೆಂಬುದು ನಮ್ಮ ಪಕ್ಷದ ಪ್ರತಿಯೊಬ್ಬ ಸಹದ್ಯೋಗಿಗಳಿಗೂ ತಿಳಿದಿದೆ. ನಾವು ಹೇಗೆ ನೂತನ ನಾಯಕತ್ವವನ್ನು ಸೃಷ್ಟಿಸುತ್ತೇವೆ ಎಂಬ ಬಗ್ಗೆ ನಮ್ಮ ಸಹದ್ಯೋಗಿಗಳಿಗೆ ಆತ್ಮವಿಶ್ವಾಸವಿದೆ ಎಂದವರು ತಿಳಿಸಿದ್ದಾರೆ.
1999ರಲ್ಲಿ ಎನ್ಸಿಪಿ ಪಕ್ಷ ರಚನೆಯಾದಾಗ ತಾವು ಹೇಗೆ ನೂತನ ನಾಯಕತ್ವ ಸಮೂಹವನ್ನು ಹೇಗೆ ಸೃಷ್ಟಿಸಿದೆವು ಎಂಬ ಬಗ್ಗೆ ಅವರು ಉದಾಹರಣೆಗಳೊಂದಿಗೆ ವಿವರಿಸಿದರು. ‘‘
1999ರಲ್ಲಿ ನಾವು ಕಾಂಗ್ರೆಸ್ ಜೊತೆ ಕೈಜೋಡಿಸಿ ಸರಕಾರ ರಚಿಸಿದೆವು. ಜಯಂತ್ ಪಟೇಲ್, ಅಜಿತ್ ಪವಾರ್, ಆರ್.ಆರ್.ಪಾಟೀಲ್, ದಿಲೀಪ್ ವಾಲ್ಸೆ ಪಾಟೀಲ್, ಅನಿಲ್ ದೇಶಮುಖ್ ಹೀಗೆ ಹಲವರು ಮಂದಿ ಮೊದಲ ಬಾರಿಗೆ ಅಧಿಕಾರವನ್ನು ಅನುಭವಿಸಿದರು. ಅವರಲ್ಲಿ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವುದನ್ನು ಇಡೀ ಮಹಾರಾಷ್ಟ್ರವೇ ಕಂಡಿದೆ ಎಂದು ಪವಾರ್ ತಿಳಿಸಿದರು.
ಬಿಜೆಪಿ ಜೊತೆ ಎನ್ಸಿಪಿ ಪಕ್ಷವು ಸರಸವಾಡುತ್ತಿದೆಯೆಂಬ ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪವಾರ್ ಅವರು, ‘‘ ಕಾಂಗ್ರೆಸ್ನಲ್ಲಿ ಪೃಥ್ವಿರಾಜ್ ಚವಾಣ್ ಅವರ ಸ್ಥಾನವೇನು ಎಂದು ಪ್ರಶ್ನಿಸಿದರು.







