ಶಾಸಕ ಉಮಾನಾಥ ಕೋಟ್ಯಾನ್ ರಿಂದ ಮತದಾರರಿಗೆ ಬಾಡೂಟ : ಕಾಂಗ್ರೆಸ್ ಕಾರ್ಯಕರ್ತರ ಆರೋಪ

ಮಂಗಳೂರು, ಮೇ 9: ಮುಲ್ಕಿ- ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಮೂಡುಬಿದ್ರೆಯಲ್ಲಿ ಏರ್ಪಡಿಸಿದ್ದ ಬಾಡೂಟಕ್ಕೆ ಪೊಲೀಸರು ದಾಳಿ ಮಾಡಿದ ವೇಳೆ ತಪ್ಪಿಸಿಕೊಳ್ಳುವ ಭರದಲ್ಲಿ ಓಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಶಾಸಕರಿಗೆ ಸೇರಿದ ವಾಹನ ಢಿಕ್ಕಿ ಹೊಡೆದು ಆತ ಗಂಭೀರ ಗಾಯಗೊಂಡಿರುವುದಾಗಿ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಕಾಂಗ್ರೆಸ್ ಆರೋಪಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಹಿತ ಬರಹವೊಂದು ವೈರಲಾಗುತ್ತಿದೆ.
ಮುಲ್ಕಿ- ಮೂಡಬಿದ್ರೆ ಶಾಸಕ ಹಾಗು ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅವರು ಮೂಡುಬಿದ್ರೆಯ ಕಡಲ್ ಕೆರೆ ಎಂಬಲ್ಲಿ ಕಾರ್ಯಕರ್ತರಿಗೆ ಬಾಡೂಟವನ್ನು ಏರ್ಪಡಿಸಿದ್ದರು ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಅಧಿಕಾರಿ ಮತ್ತು ಮೂಡಬಿದ್ರೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು ಎನ್ನಲಾಗಿದೆ.
ಮಾಹಿತಿ ಆಧಾರದಲ್ಲಿ ಮೂಡಬಿದ್ರೆ ತಹಶೀಲ್ದಾರ್, ಪೊಲೀಸರು ಮತ್ತು ಚುನಾವಣಾ ವಿಚಕ್ಷಣಾ ತಂಡ ದಾಳಿ ಮಾಡಿತ್ತು. ದಾಳಿಗೆ ಹೆದರಿದ ಬಿಜೆಪಿ ಕಾರ್ಯಕರ್ತರೊಬ್ಬರು ಓಡುತ್ತಿದ್ದ ವೇಳೆ ಶಾಸಕರ ಸಾಮಾಜಿಕ ಜಾಲತಾಣ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರ ವಾಹನ ಢಿಕ್ಕಿ ಹೊಡೆದಿದೆ. ಅಪಘಾತಕ್ಕೀಡಾದ ಬಿಜೆಪಿ ಕಾರ್ಯಕರ್ತ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದರು. ಅಲ್ಲದೆ, ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿತ್ತು.
ಘಟನೆಗೆ ಸಂಬಂಧಿಸಿದಂತೆ ʼವಾರ್ತಾಭಾರತಿʼ ಮೂಡಬಿದ್ರೆ ಪೊಲೀಸ್ ನಿರೀಕ್ಷಕ ರಾಮಚಂದ್ರ ಅವರನ್ನು ಸಂಪರ್ಕಿಸಿದಾಗ, ಬಾಡೂಟ ನಡೆಸುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯ ಅಧಿಕಾರಿಗಳು ಮತ್ತು ಚುನಾವಣಾ ಅಧಿಕಾರಿಗಳ ಜೊತೆ ನಾವು ದಾಳಿ ಮಾಡಲಾಗಿತ್ತು. ಅಲ್ಲಿ ಯಾವುದೇ ಬಾಡೂಟ ವ್ಯವಸ್ಥೆ ಮಾಡಿರುವುದು ಗಮನಕ್ಕೆ ಪತ್ತೆಯಾಗಿಲ್ಲ. ವಡೆ, ದೋಸೆಯನ್ನೊಳಗೊಂಡ ಉಪಾಹಾರ ಪತ್ತೆಯಾಗಿತ್ತು. ಈ ಕುರಿತು ಅನುಮತಿ ಪಡೆಯದೇ ಕಾರ್ಯಕ್ರಮ ಆಯೋಜಿಸಿದ್ದ ಶ್ರೀನಿವಾಸ ಕಾಮತ್ ಎಂಬವರಿಗೆ ನೋಟಿಸ್ ನೀಡಲಾಗಿದ್ದು, ತನಿಖೆ ನಡೆಸಿ ನ್ಯಾಯಾಲಯಕ್ಕೆ ರಿಪೋರ್ಟ್ ನೀಡಲು ತಹಶೀಲ್ದಾರ್ ಸೂಚಿಸಿದ್ದಾರೆ. ಅಪಘಾತಕ್ಕೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತು ಚುನಾವಣಾ ಅಧಿಕಾರಿಯನ್ನು ಪ್ರಶ್ನಿಸಿದಾಗ, ಬಾಡೂಟ ಏರ್ಪಡಿಸಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮತ್ತು ಚುನಾವಣಾ ವಿಚಕ್ಷಣಾ ತಂಡ ದಾಳಿ ಮಾಡಿತ್ತು. ಆ ಸಂದರ್ಭ ಅಲ್ಲಿ ಯಾರೊಬ್ಬರೂ ಪತ್ತೆಯಾಗಿರಲಿಲ್ಲ. ಬಾಡೂಟ ವ್ಯವಸ್ಥೆ ಮಾಡಲಾಗಿರುವುದು ಪತ್ತೆಯಾಗಿತ್ತು. ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಚುನಾವಣಾಧಿಕಾರಿ ಮಹೇಶ್ ಚಂದ್ರ ಅವರು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳಿಂದ ದ್ವಂದ್ವ ಹೇಳಿಕೆ: ಕಾಂಗ್ರೆಸ್ ಆರೋಪಕ್ಕೆ ಪುಷ್ಠಿ
ಮುಲ್ಕಿ - ಮೂಡುಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಬಾಡೂಟ ಏರ್ಪಡಿಸಿದ್ದ ಕುರಿತು ಕಾಂಗ್ರೆಸ್ ಕಾರ್ಯಕರ್ತರ ಆರೋಪದ ಕುರಿತು ಅಧಿಕಾರಿಗಳನ್ನು ಸಂಪರ್ಕಿಸಿದಾಗ ದ್ವಂದ್ವ ಹೇಳಿಕೆ ನೀಡಿರುವುದು ಗೋಚರಿಸಿದೆ.
ಘಟನೆಗೆ ಸಂಬಂಧಿಸಿದಂತೆ ಮೂಡುಬಿದ್ರೆ ಪೊಲೀಸ್ ನಿರೀಕ್ಷಕ ರಾಮಚಂದ್ರ ಅವರು, ಬಾಡೂಟದ ವ್ಯವಸ್ಥೆಯಿರಲಿಲ್ಲ. ಉಪಹಾರದ ವ್ಯವಸ್ಥೆ ಮಾಡಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದರೆ, ಚುನಾವಣಾ ಅಧಿಕಾರಿ ಮಹೇಶ್ಚಂದ್ರ ಅವರು ಬಾಡೂಟದ ವ್ಯವಸ್ಥೆ ಮಾಡಿರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸರಕಾರಿ ಅಧಿಕಾರಿಗಳ ದ್ವಂದ್ವ ಹೇಳಿಕೆಗಳು ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಕಾಂಗ್ರೆಸ್ ಕಾರ್ಯಕರ್ತರ ಆರೋಪಕ್ಕೆ ಪುಷ್ಠಿ ನೀಡುವಂತಿದೆ.