2021ರ ಬಳಿಕ ಕ್ರೈಸ್ತ ಸಮುದಾಯದ ಮೇಲಿನ ದಾಳಿ ಹೆಚ್ಚಳ: ಸುಪ್ರೀಂಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖ

ಹೊಸದಿಲ್ಲಿ, ಮೇ 9: 2021ರ ಬಳಿಕ ದೇಶದಲ್ಲಿ ಕ್ರೈಸ್ತ ಸಮುದಾಯದ ಮೇಲಿನ ದಾಳಿಗಳು ಹೆಚ್ಚಿವೆ ಹಾಗೂ ಹಲವು ರಾಜ್ಯಗಳಲ್ಲಿ ಮತಾಂತರ ನಿಷೇದ ಕಾನೂನುಗಳು ಜಾರಿಯಾದ ಮೇಲೆ ಈ ಹೆಚ್ಚಳವಗಿದೆ ಎಂದು ಮಂಗಳವಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾದ ಅರ್ಜಿಯೊಂದು ಹೇಳಿದೆ.
ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್, ಉತ್ತರಾಖಂಡ, ಛತ್ತೀಸ್ಗಢ, ಹರ್ಯಾಣ, ಝಾರ್ಖಂಡ್, ಕರ್ನಾಟಕ ಮತ್ತು ಹಿಮಾಚಲಪ್ರದೇಶ- ಈ ಒಂಭತ್ತು ರಾಜ್ಯಗಳಲ್ಲಿ ಅಲ್ಲಿನ ಬಿಜೆಪಿ ಸರಕಾರಗಳು ಮತಾಂತರ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿವೆ. ಈ ಕಾನೂನುಗಳ ಪ್ರಕಾರ, ಮದುವೆಯಗುವುದಕ್ಕಾಗಿ ಮತಾಂತರಗೊಳ್ಳಲು ಪೂರ್ವಾನುಮತಿ ಬೇಕಾಗುತ್ತದೆ.
ಭಾರತದಲ್ಲಿ ಕ್ರೈಸ್ತರ ಮೇಲಿನ ದಾಳಿಗಳು ಹೆಚ್ಚುತ್ತಿವೆ ಎಂದು ಆರೋಪಿಸಿ ಬೆಂಗಳೂರು ಆರ್ಚ್ಬಿಶಪ್ ಪೀಟರ್ ಮಚಾದೊ, ನ್ಯಾಶನಲ್ ಸಾಲಿಡಾರಿಟಿ ಫೋರಮ್ ಮತ್ತು ಇವ್ಯಾಂಜಲಿಕಲ್ ಫೆಲೋಶಿಪ್ ಆಫ್ ಇಂಡಿಯಾ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ಈ ಅರ್ಜಿಗಳಲ್ಲಿ ಸತ್ಯವಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ‘‘ಕೆಲವು ಸಂಘಟನೆಗಳು ಲೇಖನಗಳನ್ನು ಪ್ರಕಟಿಸುತ್ತವೆ ಮತ್ತು ಸ್ವತಃ ತಾವೇ ಅಥವಾ ತಮ್ಮ ಸಂಗಡಿಗರ ಮೂಲಕ ತಮಗೆ ಬೇಕಾದ ವರದಿಗಳನ್ನು ಸಿದ್ಧಪಡಿಸುತ್ತವೆ. ಇವುಗಳ ಆಧಾರದಲ್ಲಿ ಮುಂದೆ ರಿಟ್ ಅರ್ಜಿಗಳನ್ನು ಸಲ್ಲಿಸಲಾಗುತ್ತದೆ. ಇದು ಇತ್ತೀಚಿ ಪ್ರವೃತ್ತಿಯಾಗಿದೆ’’ ಎಂದು ಸರಕಾರ ತನ್ನ ಅಫಿದಾವಿತ್ನಲ್ಲಿ ಹೇಳಿದೆ.
ಮಂಗಳವಾರ ಈ ಅಫಿದಾವಿತ್ ಗೆ ಪ್ರತಿಕ್ರಿಯಿಸಿರುವ ಅರ್ಜಿದಾರರು, ಕ್ರೈಸ್ತ ಸಮುದಾಯದ ಸದಸ್ಯರ ಮೇಲಿನ ದಾಳಿಗಳು ‘‘ಆ ಕ್ಷಣದಲ್ಲೇ ಹುಟ್ಟುವ ಪತ್ಯೇಕಿತ ಘಟನೆಗಳಲ್ಲ’’, ಅವುಗಳು ‘‘ಅತ್ಯಂತ ಯೋಜಿತ ತಂತ್ರಗಾರಿಕೆ’’ಯ ಭಾಗವಾಗಿದೆ ಎಂದು ಹೇಳಿದ್ದಾರೆ.







