ಏಶ್ಯಕಪ್ ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಹಿಷ್ಕಾರ ಸಾಧ್ಯತೆ: ವರದಿ

ಹೊಸದಿಲ್ಲಿ: ಈ ವರ್ಷದ ಏಶ್ಯ ಕಪ್ ಅನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವುದನ್ನು ಪಾಕಿಸ್ತಾನ ಕ್ರಿಕೆಟ್ ಅಧಿಕಾರಿಗಳು ವಿರೋಧಿಸಿದ್ದಾರೆ ಹಾಗೂ ತಮ್ಮ ಪ್ರಸ್ತಾವನೆಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಂಗೀಕರಿಸದಿದ್ದರೆ ಪ್ರಾದೇಶಿಕ ಪಂದ್ಯಾವಳಿಯನ್ನು ಬಹಿಷ್ಕರಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ನಜಮ್ ಸೇಥಿ ಅವರು ಮಂಗಳವಾರ ದುಬೈನಲ್ಲಿ ಏಶ್ಯನ್ ಕ್ರಿಕೆಟ್ ಕೌನ್ಸಿಲ್ ಅಧಿಕಾರಿಗಳನ್ನು ಭೇಟಿ ಮಾಡಿದರು ಹಾಗೂ ಏಶ್ಯ ಕಪ್ ಅನ್ನು ಯುಎಇಯಲ್ಲಿ ಆಯೋಜಿಸುವ ಬದಲು ಶ್ರೀಲಂಕಾಕ್ಕೆ ಸ್ಥಳಾಂತರಿಸುವ ಕ್ರಮವನ್ನು ವಿರೋಧಿಸಿದರು.
"ಏಶ್ಯಕಪ್‌ಗಾಗಿ ಪಾಕಿಸ್ತಾನದ ಪರಿಷ್ಕೃತ ಹೈಬ್ರಿಡ್ ಮಾದರಿಯ ಪ್ರಸ್ತಾಪದ ವೇಳಾಪಟ್ಟಿಯನ್ನು ಎಸಿಸಿ ಒಪ್ಪಿಕೊಳ್ಳಬೇಕು . ಬಹುಪಾಲು ಸದಸ್ಯರು ಏಶ್ಯಾಕಪ್ ನ್ನು ಬೇರೆಡೆ ಆಯೋಜಿಸಲು ಬಯಸಿದರೆ ಅದನ್ನು 2018 ಮತ್ತು 2022 ರಲ್ಲಿ ಆಯೋಜಿಸಿದಂತೆ ಯುಎಇಯಲ್ಲಿ ನಡೆಸಬೇಕು ಎಂದು ಸೇಥಿ ಒತ್ತಿಹೇಳಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ಉಷ್ಣಾಂಶ ಜಾಸ್ತಿಯಾಗಿರುವ ಕಾರಣ ಆಡಲು ಕಷ್ಟವಾಗುತ್ತದೆ ಎಂದು ಎಸಿಸಿಗೆ ಬಿಸಿಸಿಐ ಕಳವಳ ವ್ಯಕ್ತಪಡಿಸಿರುವುದನ್ನು ತಳ್ಳಿ ಹಾಕಿದ ಸೇಥಿ, 2020 ರ ಸೆಪ್ಟೆಂಬರ್‌ನಿಂದ ನವೆಂಬರ್‌ನಲ್ಲಿ ಯುಎಇಯಲ್ಲಿ ಬಿಸಿಸಿಐ ತನ್ನ ಐಪಿಎಲ್ ಅನ್ನು ಯುಎಇನಲ್ಲಿ ಆಯೋಜಿಸಿತ್ತು ಎನ್ನುವುದನ್ನು ಬೆಟ್ಟು ಮಾಡಿದರು.







