ಚಿತ್ತಾಪುರ | ಮತಗಟ್ಟೆ ಅಧಿಕಾರಿ ಯಡವಟ್ಟು; ಚಾಮನೂರು ಮತ ಕೇಂದ್ರದಲ್ಲಿ ಕೆಲಕಾಲ ಮತದಾನ ಸ್ಥಗಿತ
ಬಿಜೆಪಿಗೆ ಮತ ಹಾಕುವಂತೆ ಅಧಿಕಾರಿಯಿಂದ ಪ್ರೇರಣೆ: ಪ್ರಿಯಾಂಕ್ ಖರ್ಗೆ ಆರೋಪ

ಕಲಬುರಗಿ: ಚಿತ್ತಾಪುರ ತಾಲೂಕಿನ ಚಾಮನೂರು ಮತ ಕೇಂದ್ರದಲ್ಲಿ ಮತಗಟ್ಟೆ ಅಧಿಕಾರಿಯೊಬ್ಬರು ಮತದಾರನ ಮತವನ್ನು ಬದಲಿ ಪಕ್ಷಕ್ಕೆ ಹಾಕಿದ್ದರಿಂದ ಕೆಲಕಾಲ ಮತದಾನ ಸ್ಥಗಿತಗೊಂಡ ಘಟನೆ ವರದಿಯಾಗಿದೆ.
ಬಿ.ಸಿ. ಚವ್ಹಾಣ್ ಎಂಬ ಚುನಾವಣಾ ಅಧಿಕಾರಿಯು ಮತ ಗಟ್ಟೆಗೆ ಬಂದಿದ್ದ ಬಸಮ್ಮ ಎಂಬ ಮಹಿಳೆ ಮತಗಟ್ಟೆಗೆ ಹೋಗಿ ಕಾಂಗ್ರೆಸ್ ಅಭ್ಯರ್ಥಿಯ ಚಿಹ್ನೆಗೆ ಬಟನ್ ಒತ್ತಲು ತಿಳಿಸಿದ್ದಾರೆ. ಆದರೆ ಅಧಿಕಾರಿ ಬಿಜೆಪಿ ಅಭ್ಯರ್ಥಿಯ ಮುಂದಿರುವ ಬಟನ್ ಒತ್ತಿದ್ದಾರೆ. ಅದು ಮಹಿಳೆ ಗಮನಕ್ಕೆ ಬಂದು ಆಕ್ಷೇಪ ವ್ಯಕ್ತಪಡಿಸಿದಾಗ ಘಟನೆ ಬಯಲಿಗೆ ಬಂದು ಗಲಾಟೆಯಾಗಿದೆ ಎಂದು ಹೇಳಲಾಗಿದೆ.
ಇದಕ್ಕೂ ಮೊದಲು ಮತಯಂತ್ರ ಪರೀಕ್ಷೆ ಸಮಯದಲ್ಲಿ ಸಹ ಬಿಜೆಪಿಗೆ ಸುಮಾರು ಐವತ್ತಕ್ಕೂ ಅಧಿಕ ಮತ ಹಾಕಲಾಗಿದೆ ಎಂದು ಹೇಳಲಾಗಿದ್ದು, ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಚಿತ್ತಾಪುರ ಚುನಾವಣಾಧಿಕಾರಿಗೆ ವಿಷಯ ತಿಳಿಸಿ ಅಧಿಕಾರಿಯನ್ನು ಬದಲಿಸಲು ಒತ್ತಾಯಿಸಿದರು. ಇದರಿಂದಾಗಿ ಅಧಿಕಾರಿಯನ್ನು ಬದಲಾವಣೆ ಮಾಡಿದ ಬಳಿಕ ಮತದಾನ ಆರಂಭಗೊಂಡಿತು ಎಂದು ಮೂಲಗಳು ತಿಳಿಸಿವೆ.
ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿಗೆ ಮತ ಹಾಕುವಂತೆ ಅಧಿಕಾರಿಯು ಮತದಾರರಿಗೆ ಪ್ರೇರೇಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.
Polling stopped in Booth #178 Chamnur village as the Presiding Officer is prompting/influencing people to vote for BJP.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 10, 2023







