ಇಮ್ರಾನ್ ಖಾನ್ ಬಿಡುಗಡೆ ತನಕ ರಾಷ್ಟ್ರವ್ಯಾಪಿ ಪ್ರತಿಭಟನೆ ಮುಂದುವರಿಕೆ: ಪಿಟಿಐ ಘೋಷಣೆ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆಗೊಳ್ಳುವವರೆಗೂ ರಾಷ್ಟ್ರವ್ಯಾಪಿ ನಡೆಯುತ್ತಿರುವ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು ಪ್ರತಿಪಾದಿಸಿರುವ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಬುಧವಾರ ಬೆಳಗ್ಗೆ 8 ಗಂಟೆಗೆ ಇಸ್ಲಾಮಾಬಾದ್ ನ್ಯಾಯಾಂಗ ಸಂಕೀರ್ಣದಲ್ಲಿ ಜಮಾಯಿಸುವಂತೆ ಸೂಚನೆ ನೀಡಿದೆ.
“ಪಕ್ಷದ ನಾಯಕತ್ವದಿಂದ ಪ್ರಮುಖ ಸೂಚನೆಗಳು: ತೆಹ್ರೀಕ್-ಇ-ಇನ್ಸಾಫ್‌ನ ಹಿರಿಯ ನಾಯಕತ್ವ ಹಾಗೂ ಇಸ್ಲಾಮಾಬಾದ್‌ನ ಕಾರ್ಯಕರ್ತರು ಮತ್ತು ಬೆಂಬಲಿಗರು ಬೆಳಿಗ್ಗೆ 8 ಗಂಟೆಗೆ ನ್ಯಾಯಾಂಗ ಸಂಕೀರ್ಣ ಇಸ್ಲಾಮಾಬಾದ್‌ಗೆ ಆಗಮಿಸಲಿದ್ದಾರೆ. ಇಮ್ರಾನ್ ಖಾನ್ ಬಿಡುಗಡೆಯಾಗುವವರೆಗೂ ದೇಶಾದ್ಯಂತ ನಡೆಯುತ್ತಿರುವ ಧರಣಿ ಹಾಗೂ ಪ್ರತಿಭಟನೆಗಳು ಆಯಾ ಸ್ಥಳಗಳಲ್ಲಿ ಮುಂದುವರಿಯುತ್ತವೆ’’ ಎಂದು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ತಿಳಿಸಿದೆ.
ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಅವರ ಬಂಧನವನ್ನು ಇಸ್ಲಾಮಾಬಾದ್ ಹೈಕೋರ್ಟ್ ಎತ್ತಿ ಹಿಡಿದಿರುವುದನ್ನು ಪ್ರಶ್ನಿಸಿ ಪಕ್ಷವು ಇಂದು ಬೆಳಿಗ್ಗೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲಿದೆ ಎಂದು ಪಕ್ಷದ ಹಿರಿಯ ಉಪಾಧ್ಯಕ್ಷ ಫವಾದ್ ಚೌಧರಿ ಬುಧವಾರ ಹೇಳಿದ್ದಾರೆ.
ಇಸ್ಲಾಮಾಬಾದ್ ಹೈಕೋರ್ಟ್‌ನ ತೀರ್ಪು "ಆಶ್ಚರ್ಯಕರ" ಎಂದು ಫವಾದ್ ಚೌಧರಿ ಬಣ್ಣಿಸಿದ್ದಾರೆ.
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ರನ್ನು ಇಸ್ಲಾಮಾಬಾದ್ ನ ನ್ಯಾಯಾಲಯದ ಹೊರಗೆ ಮಂಗಳವಾರ ಬಂಧಿಸಲಾಗಿದೆ.







